ಬಂಧಿತ ಅಶೋಕ ವಿವಿಯ ಪ್ರೊ.ಅಲಿ ಖಾನ್‌ಗೆ ಬೆಂಬಲದ ಮಹಾಪೂರ
ಪ್ರೊ.ಅಲಿ ಖಾನ್ | PC : hindustantimes.com
ಹೊಸದಿಲ್ಲಿ: ತನ್ನ ಫೇಸ್‌ಬುಕ್ ಪೋಸ್ಟ್‌ಗಾಗಿ ರವಿವಾರ ಬಂಧಿಸಲ್ಪಟ್ಟಿರುವ ಅಶೋಕ ವಿವಿಯ ಪ್ರೊ.ಅಲಿ ಖಾನ್ ಮಹ್ಮೂದಾಬಾದ್ ಅವರಿಗೆ ಬೆಂಬಲದ ಮಹಾಪೂರವೇ ಹರಿದು ಬರುತ್ತಿದೆ. ಅವರೊಂದಿಗೆ ಒಕ್ಕಟ್ಟನ್ನು ಘೋಷಿಸುವ ಪತ್ರಕ್ಕೆ 1,000ಕ್ಕೂ ಅಧಿಕ ಶಿಕ್ಷಣ ತಜ್ಞರು,ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳು ಸಹಿ ಹಾಕಿದ್ದಾರೆ.
ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ನಡೆಸಿದ್ದ ‘ಆಪರೇಷನ್ ಸಿಂಧೂರ’ ಸುದ್ದಿಗೋಷ್ಠಿಯನ್ನು ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದ ಖಾನ್,ಮುಸ್ಲಿಮರ ವಿರುದ್ಧ ಸರಕಾರಿ ಹಿಂಸಾಚಾರ ಮತ್ತು ಗುಂಪಿನಿಂದ ಹತ್ಯೆಗಳನ್ನು ಕಡೆಗಣಿಸಿ ಸಶಸ್ತ್ರ ಪಡೆಗಳಲ್ಲಿ ಮುಸ್ಲಿಮ್ ಪ್ರಾತಿನಿಧ್ಯವನ್ನು ಪ್ರಶಂಸಿಸುವ ಬಲಪಂಥೀಯ ಬೂಟಾಟಿಕೆಯನ್ನು ಟೀಕಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಅವರನ್ನು ಬಂಧಿಸಿದ್ದಾರೆ.
ಅಲಿ ಖಾನ್ ಮಹ್ಮದಾಬಾದ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಹೇಳಿಕೆ ನೀಡಿದ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ಅವು ಪ್ರಶ್ನಿಸಿವೆ.