×
Ad

ಜಪಾನ್ ರಾಯಭಾರ ಕಚೇರಿಯ ಅಧಿಕಾರಿಯೊಂದಿಗೆ ಲೈಂಗಿಕ ದುರ್ವರ್ತನೆ ಆರೋಪ:‌ ಜೆಎನ್‌ಯು ಪ್ರೊಫೆಸರ್ ವಜಾ

Update: 2025-04-18 16:25 IST

PC : PTI 

ಹೊಸದಿಲ್ಲಿ: ಜಪಾನ್ ರಾಯಭಾರ ಕಚೇರಿಯ ಮಹಿಳಾ ಅಧಿಕಾರಿಯೊಂದಿಗೆ ಲೈಂಗಿಕ ದುರ್ವರ್ತನೆ ಆರೋಪದಲ್ಲಿ ತನ್ನ ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಪ್ರೊಫೆಸರ್ ಸ್ವರಣ್ ಸಿಂಗ್ ಅವರನ್ನು ವಜಾಗೊಳಿಸಲು ದಿಲ್ಲಿಯ ಜವಾಹರಲಾಲ ನೆಹರು ವಿವಿ(ಜೆಎನ್‌ಯು) ನಿರ್ಧರಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ವಿವಿಯ ಆಂತರಿಕ ದೂರುಗಳ ಸಮಿತಿ(ಐಸಿಸಿ)ಯು ಬುಧವಾರ ಜೆಎನ್‌ಯು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತನ್ನ ತನಿಖಾ ವರದಿಯನ್ನು ಮಂಡಿಸಿದ ಬಳಿಕ ಪ್ರೊ.ಸಿಂಗ್ ಅವರನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ.

ಜಪಾನಿ ಅಧಿಕಾರಿ ಸಮ್ಮೇಳನಗಳ ಆಯೋಜನೆಗಾಗಿ ಪ್ರೊ.ಸಿಂಗ್ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು. ಐಸಿಸಿಗೆ ದೂರು ಸಲ್ಲಿಸಿದ್ದ ಅವರು,ಸಾಕ್ಷ್ಯಾಧಾರವಾಗಿ ತಮ್ಮಿಬ್ಬರ ನಡುವಿನ ಸಂಭಾಷಣೆಗಳ ಧ್ವನಿಮುದ್ರಣವನ್ನು ಸಲ್ಲಿಸಿದ್ದರು ಎಂದು ಜೆಎನ್‌ಯು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಸಿಂಗ್ ನಿವೃತ್ತಿಗೆ ಕೇವಲ ಒಂದು ವರ್ಷ ಬಾಕಿಯಿರುವಾಗ ಸೇವೆಯಿಂದ ವಜಾಗೊಂಡಿದ್ದಾರೆ.

ಕಳೆದ ವರ್ಷದ ಮೇ ತಿಂಗಳಲ್ಲಿ ದೂರು ವಿವಿಯ ಗಮನಕ್ಕೆ ಬಂದಿತ್ತು. ತನಿಖೆಯನ್ನು ನಡೆಸಿದ ಐಸಿಸಿ ಪ್ರೊ.ಸಿಂಗ್ ಅವರು ಹಿಂದೆ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾಗಲೂ ದುರ್ವರ್ತನೆಯ ಆರೋಪಗಳನ್ನು ಎದುರಿಸಿದ್ದರು ಎನ್ನುವುದನ್ನೂ ಕಂಡುಕೊಂಡಿದೆ ಎಂದು ಅಧಿಕಾರಿ ತಿಳಿಸಿದರು.

ಮೂಲಗಳ ಪ್ರಕಾರ ಸಿಂಗ್ ಹಿಂದೆ ಇಂತಹುದೇ ಆರೋಪಗಳ ಹಿನ್ನೆಲೆಯಲ್ಲಿ ಜೆಎನ್‌ಯುದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಅವರು ಪ್ರೊಫೆಸರ್ ಆಗಿ ವಿವಿಗೆ ಮತ್ತೆ ಸೇರಿದ್ದರು. ಸಿಂಗ್ ಸೇವಾವಧಿಯಲ್ಲಿ ಅವರ ವಿರುದ್ಧ ಎಂಟು ಲೈಂಗಿಕ ಕಿರುಕುಳ ದೂರುಗಳನ್ನು ವಿವಿ ಸ್ವೀಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News