ಉಗ್ರರ ಮೇಲೆ ನಡೆಸಿದ ದಾಳಿಯನ್ನು ಪಾಕಿಸ್ತಾನ ವೈಯಕ್ತಿಕವಾಗಿ ತೆಗೆದುಕೊಂಡಿತು: ಅಮಿತ್ ಶಾ
ಅಮಿತ್ ಶಾ | PTI
ಹೊಸದಿಲ್ಲಿ: ಭಯೋತ್ಪಾದನೆಯ ವಿರುದ್ಧ ನೀಡಿರುವ ಪ್ರಬಲ ಪ್ರತಿಕ್ರಿಯೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ದರ್ಜೆ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಮತ್ತು ಭಯೋತ್ಪಾದಕ ದಾಳಿಯಲ್ಲಿ ಸಂಭವಿಸಿದ ಸಾವುಗಳಿಗಾಗಿ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
‘‘ನಮ್ಮ ಪ್ರಧಾನಿಯ ಪ್ರಬಲ ರಾಜಕೀಯ ಇಚ್ಛಾಶಕ್ತಿ, ನಮ್ಮ ಬೇಹುಗಾರಿಕಾ ಸಂಸ್ಥೆಗಳು ಸಂಗ್ರಹಿಸಿದ ನಿಖರ ಮಾಹಿತಿ ಮತ್ತು ಸೇನೆಯ ಮಾರಕ ಪ್ರಹಾರದ ಫಲವೇ ಆಪರೇಶನ್ ಸಿಂಧೂರ. ಈ ಎಲ್ಲಾ ಮೂರು ಅಂಶಗಳು ಒಂದುಗೂಡಿದಾಗ ಆಪರೇಶನ್ ಸಿಂಧೂರ ಸಂಭವಿಸಿತು’’ ಎಂದು ಅಮಿತ್ ಶಾ ಹೇಳಿದರು.
ಪಾಕಿಸ್ತಾನವು ಹಲವು ವರ್ಷಗಳಿಂದ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಾ ಬರುತ್ತಿದೆ ಎಂದು ಅವರು ಹೇಳಿದರು. ಇದರಿಂದಾಗಿ ಭಾರತ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದೆಯಾದರೂ, ಈ ವಿಷಯದಲ್ಲಿ ನಮ್ಮ ನೆರೆಯ ದೇಶಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಲಾಗಿಲ್ಲ ಎಂದರು.
‘‘ನಾವು ಭಯೋತ್ಪಾದಕರ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾವಿಸಿದ್ದೇವೆ. ಆದರೆ, ತಾನು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವುದನ್ನು ಪಾಕಿಸ್ತಾನ ಸಾಬೀತುಪಡಿಸಿದೆ. ಭಯೋತ್ಪಾದಕರ ಮೇಲೆ ನಡೆದ ದಾಳಿಯನ್ನು ಪಾಕಿಸ್ತಾನ ತನ್ನ ಮೇಲೆ ನಡೆದ ದಾಳಿ ಎಂಬುದಾಗಿ ಪರಿಗಣಿಸಿತು. ಪಾಕಿಸ್ತಾನಿ ಸೇನೆಯು ನಮ್ಮ ನಾಗರಿಕ ಪ್ರದೇಶಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿದಾಗ, ಭಾರತೀಯ ಸೇನೆಯು ಪ್ರಬಲ ಪ್ರತಿಕ್ರಿಯೆ ನೀಡಿತು. ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯ ಸೇನೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು’’ ಎಂದು ಅಮಿತ್ ಶಾ ಹೇಳಿದರು.