×
Ad

ಲೋಕಸಭೆಯಲ್ಲಿ ಅಮಿತ್ ಶಾ – ಕೆ.ಸಿ. ವೇಣುಗೋಪಾಲ್ ನಡುವೆ ತೀವ್ರ ವಾಗ್ಯುದ್ಧ

‘ನೀವು ನನಗೆ ನೈತಿಕತೆಯನ್ನು ಕಲಿಸುತ್ತೀರಾ?’ ಎಂದ ಅಮಿತ್ ಶಾ

Update: 2025-08-20 22:33 IST

 ಅಮಿತ್ ಶಾ , ಕೆ.ಸಿ. ವೇಣುಗೋಪಾಲ್ | PC : PTI

ಹೊಸದಿಲ್ಲಿ, ಆ.20: ಲೋಕಸಭೆಯಲ್ಲಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ನಡುವೆ ತೀವ್ರ ವಾಗ್ಯುದ್ಧ ನಡೆಯಿತು. ಪ್ರಧಾನಿಗಳು, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧಿಸಿದಲ್ಲಿ ಸತತ 30 ದಿನಗಳೊಳಗೆ ಹುದ್ದೆಯಿಂದ ವಜಾಗೊಳಿಸುವ ಗುರಿಯೊಂದಿಗೆ ಸರ್ಕಾರ ಮಂಡಿಸಿರುವ ಮೂರು ಪ್ರಮುಖ ಮಸೂದೆಗಳ ಕುರಿತ ಚರ್ಚೆಯ ವೇಳೆ ಸದನದಲ್ಲಿ ಕಾವೇರಿದ ದೃಶ್ಯಗಳು ಕಂಡುಬಂದವು.

ಚರ್ಚೆಯ ವೇಳೆ ಕೆ.ಸಿ. ವೇಣುಗೋಪಾಲ್ ಅವರು, 2010ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಬಂಧಿತರಾಗಿದ್ದ ವಿಷಯವನ್ನು ಉಲ್ಲೇಖಿಸಿ ತೀವ್ರವಾಗಿ ಟೀಕಿಸಿದರು. “ಗುಜರಾತ್ ಗೃಹ ಸಚಿವರಾಗಿದ್ದಾಗ ಅಮಿತ್ ಶಾ ಬಂಧಿತರಾಗಿದ್ದರು. ಆ ಸಮಯದಲ್ಲಿ ಅವರು ನೈತಿಕತೆಯನ್ನು ಪಾಲಿಸಿದ್ದಾರೆಯೇ?” ಎಂದು ಪ್ರಶ್ನಿಸಿದರು.

ಈ ಆರೋಪಕ್ಕೆ ಆಕ್ರೋಶಗೊಂಡ ಅಮಿತ್ ಶಾ ತಕ್ಷಣ ಪ್ರತಿಕ್ರಿಯಿಸಿ, “ನಕಲಿ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟಿದ್ದರೂ ನಾನು ತಕ್ಷಣ ರಾಜೀನಾಮೆ ನೀಡಿದ್ದೆ. ಜಾಮೀನು ದೊರೆಯುವವರೆಗೆ ಯಾವುದೇ ಸಂವಿಧಾನಿಕ ಹುದ್ದೆ ಹೊಂದಿರಲಿಲ್ಲ. ನೀವು ನನಗೆ ನೈತಿಕತೆಯನ್ನು ಕಲಿಸುತ್ತೀರಾ?” ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದರು. ಈ ಹೇಳಿಕೆಗೆ NDA ನಾಯಕರು ಭಾರಿ ಬೆಂಬಲ ನೀಡಿದರು.

2010ರಲ್ಲಿ ಸಿಬಿಐ ಅಮಿತ್ ಶಾ ಅವರನ್ನು ಬಂಧಿಸಿದ ಬಳಿಕ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂರು ತಿಂಗಳು ಜೈಲಿನಲ್ಲಿ ಕಳೆದ ನಂತರ ಅವರಿಗೆ ಜಾಮೀನು ದೊರೆಯಿತು. ಬಳಿಕ 2014ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಸಾಕ್ಷ್ಯಾಭಾವದಿಂದ ಅವರನ್ನು ಸಂಪೂರ್ಣ ಖುಲಾಸೆಗೊಳಿಸಿತು.

ಅಮಿತ್ ಶಾ ಅವರು ಸಂವಿಧಾನ (130ನೇ ತಿದ್ದುಪಡಿ) ಮಸೂದೆ, ಕೇಂದ್ರ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು-ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆಗಳನ್ನು ಜಂಟಿ ಸಮಿತಿಗೆ ಕಳುಹಿಸಲು ಮುಂದಾಗುತ್ತಿದ್ದಂತೆಯೇ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗುತ್ತಾ ಬಾವಿಗೆ ನುಗ್ಗಿದರು. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮಸೂದೆಗಳ ಪ್ರತಿಗಳನ್ನು ಹರಿದು ಅಮಿತ್ ಶಾ ಅವರ ದಿಕ್ಕಿನಲ್ಲಿ ಎಸೆದಿರುವುದು ಚರ್ಚೆಗೆ ಗ್ರಾಸವಾಯಿತು.

AIMIM ಮುಖ್ಯಸ್ಥ ಅಸದುದ್ದೀನ್ ಉವೈಸಿ, ಈ ಮಸೂದೆಗಳು “ಪೊಲೀಸ್ ರಾಜ್” ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಆರೋಪಿಸಿದರು. “ಇದು ಚುನಾಯಿತ ಸರ್ಕಾರಗಳ ಸ್ತಂಭಗಳನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ,” ಎಂದು ಅವರು ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ, ಈ ಮಸೂದೆಗಳನ್ನು “ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವಂತವು. ಇವು ರಾಜಕೀಯವಾಗಿ ದುರುಪಯೋಗಕ್ಕೆ ದಾರಿ ತೆರೆಯುತ್ತವೆ” ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರವು ಈ ಮಸೂದೆಗಳ ಗುರಿಯು ಭ್ರಷ್ಟಾಚಾರ ನಿಯಂತ್ರಣ ಮತ್ತು ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿರುವ ನಾಯಕರು ಹುದ್ದೆಯಲ್ಲಿ ಮುಂದುವರಿಯುವುದನ್ನು ತಡೆಯುವುದು ಎಂದು ಸ್ಪಷ್ಟಪಡಿಸಿದೆ. ಕರಡು ಕಾನೂನಿನ ಪ್ರಕಾರ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗುವ, ಸತತ 30 ದಿನಗಳವರೆಗೆ ಬಂಧಿತರಾಗಿರುವ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು ಹುದ್ದೆಯಿಂದ ಸ್ವಯಂಚಾಲಿತವಾಗಿ ವಜಾಗೊಳ್ಳಲಿದ್ದಾರೆ. ಆದರೆ ಬಿಡುಗಡೆಯಾದ ಬಳಿಕ ಅವರನ್ನು ಪುನಃ ನೇಮಕ ಮಾಡಬಹುದು.

ಈ ಹಿಂದೆ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಜೈಲಿನಲ್ಲಿದ್ದರೂ ಅಧಿಕಾರದಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News