ಈಶಾನ್ಯ ರಾಜ್ಯಗಳಲ್ಲಿ ನಿಲ್ಲದ ಮಳೆಯ ಆರ್ಭಟ | ಭೂಕುಸಿತ, ನೆರೆಯಿಂದ ಮೃತಪಟ್ಟವರ ಸಂಖ್ಯೆ 36ಕ್ಕೇರಿಕೆ
PC : PTI
ಗುವಾಹಟಿ : ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಸ್ಸಾಂ, ಮೇಘಾಲಯ, ಸಿಕ್ಕಿಂ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಭೂಕುಸಿತ ಹಾಗೂ ಪ್ರವಾಹ ಸೇರಿದಂತೆ ಮಳೆಗೆ ಸಂಬಧಿಸಿದ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೇರಿದೆ. ವಿವಿಧ ರಾಜ್ಯಗಳಲ್ಲಿ 5.5 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ.
ಈಶಾನ್ಯ ಭಾರತದ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ನೆರೆ ಮತ್ತು ಭೂಕುಸಿತಗಳಿಂದಾಗಿ ಗರಿಷ್ಠ ಸಾವುಗಳು ಸಂಭವಿಸಿದ್ದು 11 ಮಂದಿ ಅಸುನೀಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ 10, ಮೇಘಾಲಯದಲ್ಲಿ 6, ಮಿಜೋರಾಂನಲ್ಲಿ 5, ಸಿಕ್ಕಿಂನಲ್ಲಿ ಮೂವರು ಹಾಗೂ ತ್ರಿಪುರಾದಲ್ಲಿ ಓರ್ವ ಮೃತಪಟ್ಟಿದ್ದಾನೆ.ಅಸ್ಸಾಂನ 15 ನದಿಗಳು ಉಕ್ಕಿ ಹರಿಯುತ್ತಿದ್ದು, 22 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮಂಗಳವಾರ ನೆರೆಪೀಡಿತ ಲಖೀಂಪುರ ಜಿಲ್ಲೆಗೆ ಭೇಟಿ ನೀಡಿದರು ಹಾಗೂ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವಿನ ಭರವಸೆಯನ್ನು ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ, ರೈಲು ಹಾಗೂ ನೌಕಾಯಾನಾ ಸೇವೆಗಳು ಬಾಧಿತವಾಗಿವೆ.