×
Ad

ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆಯಲು ಯತ್ನ | ಪ್ರಧಾನಿ, ಸಿಎಂ ಸಿದ್ಧರಾಮಯ್ಯ ಸಹಿತ ಪ್ರಮುಖರ ಖಂಡನೆ : ದೇಶಾದ್ಯಂತ ಆಕ್ರೋಶ

Update: 2025-10-06 23:05 IST

ಸಿಜೆಐ ಬಿ.ಆರ್. ಗವಾಯಿ / ರಾಕೇಶ್ ಕಿಶೋರ್ (Photo credit: indiatoday.in)

ಹೊಸದಿಲ್ಲಿ: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ಕಲಾಪ ನಡೆಯುತ್ತಿದ್ದಾಗಲೇ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿದ ಘಟನೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ವಕೀಲ ರಾಕೇಶ್ ಕಿಶೋರ್ ಎಂಬಾತನ ಈ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದನ್ನು ಸಂವಿಧಾನದ ಮೇಲಿನ ದಾಳಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದಲೇ ಈ ಘಟನೆ ನಡೆದಿದೆ ಎಂಬ ಆತಂಕವನ್ನು ಹಲವು ಗಣ್ಯರು ವ್ಯಕ್ತಪಡಿಸಿದ್ದಾರೆ.

ಬಾರ್ ಕೌನ್ಸಿಲ್‌ನಿಂದ ವಕೀಲನ ಅಮಾನತು :

ಘಟನೆ ಹಿನ್ನೆಲೆಯಲ್ಲಿ ಆರೋಪಿ ರಾಕೇಶ್ ಕಿಶೋರ್‌ನನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ತಕ್ಷಣದಿಂದ ಜಾರಿಗೆ ಬರುವಂತೆ ನ್ಯಾಯಾಲಯದ ಕಲಾಪದಲ್ಲಿ ತೊಡಗದಂತೆ ಅಮಾನತುಗೊಳಿಸಿದೆ. ಅಮಾನತು ಅವಧಿಯಲ್ಲಿ, ಕಿಶೋರ್ ಅವರನ್ನು ಭಾರತದಲ್ಲಿನ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ಹಾಜರಾಗುವುದು, ಕಾರ್ಯನಿರ್ವಹಿಸುವುದು, ವಾದಿಸುವುದು ಅಥವಾ ಅಭ್ಯಾಸ ಮಾಡುವುದರಿಂದ ನಿಷೇಧಿಸಲಾಗಿದೆ.

ನ್ಯಾಯಮೂರ್ತಿಯ ಶಾಂತತೆಗೆ ಪ್ರಧಾನಿ ಮೋದಿ ಮೆಚ್ಚುಗೆ :

ಈ ಖಂಡನೀಯ ಕೃತ್ಯಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, "ಇಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಕೃತ್ಯಗಳಿಗೆ ಸ್ಥಳವಿಲ್ಲ. ಇದು ಸಂಪೂರ್ಣ ಖಂಡನೀಯ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸುವಾಗ ನ್ಯಾಯಮೂರ್ತಿ ಗವಾಯಿ ಅವರು ಪ್ರದರ್ಶಿಸಿದ ಶಾಂತತೆಯನ್ನು ನಾನು ಮೆಚ್ಚಿದೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಚೈತನ್ಯವನ್ನು ಬಲಪಡಿಸುವುದಕ್ಕೆ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಮನುವಾದಿಗಳ ಮನಸ್ಸಿನಲ್ಲಿ ದಲಿತರ ಬಗ್ಗೆ ಈಗಲೂ ಅಸಹನೆ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು ಎಂದು ಹೇಳಿದ್ದಾರೆ. ಜಾತಿ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್‌ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎಂದಿರುವ ಸಿದ್ದರಾಮಯ್ಯ, ನಾಥೂರಾಮ್ ಗೋಡ್ಸೆಯಂತಹ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ, ಕೆಲವು ಪುಂಡರು ವಕೀಲನ ಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.

ಶೂ ಎಸೆದವ ಗಾಂಧಿಯನ್ನು ಕೊಂದ ಮನಸ್ಥಿತಿಯ ಕ್ರೂರಿ : ಅಡ್ವಕೇಟ್ ಬಾಲನ್

ಹಿರಿಯ ವಕೀಲ ಬಾಲನ್ ಮಾತನಾಡಿ, ನ್ಯಾಯಮೂರ್ತಿಯ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವುದು ದೇಶವೇ ತಲೆ ತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿ. ಗಾಂಧಿಯನ್ನು ಕೊಂದ, ದೇಶಾದ್ಯಂತ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವ ಕೋಮುವಾದಿ ಮನಸ್ಥಿತಿ ಆ ಲಾಯರ್‌ಗೆ ಇರುವುದರಿಂದಲೇ ಇಂತಹ ಕೃತ್ಯ ಎಸಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂ ಎಸೆದವನನ್ನು ಹುಚ್ಚ ಎನ್ನಲು ಸಾಧ್ಯವಿಲ್ಲ, ಜಾತೀಯತೆ, ಸವರ್ಣತೆ ತಲೆಗೆ ಹತ್ತಿರುವ ಕ್ರೂರಿ ಆತ ಎಂದು ಬಾಲನ್ ಹೇಳಿದ್ದಾರೆ.

ಘಟನೆಗೆ ಮೋದಿ, ಅಮಿತ್ ಶಾ, ಆರೆಸ್ಸೆಸ್ ಕಾರಣ : ಕೆ. ನೀಲಾ

ಲೇಖಕಿ, ಹೋರಾಟಗಾರ್ತಿ ಕೆ. ನೀಲಾ ಅವರು, ಮನುಸ್ಮೃತಿ ಪ್ರತಿಪಾದಕ ವಕೀಲನಿಂದ ಸಂವಿಧಾನ ಪ್ರತಿಪಾದಕರಾದ ನ್ಯಾಯಮೂರ್ತಿ ಮೇಲೆ ದಾಳಿಯಾಗಿದೆ. ಇಂತಹ ಕೃತ್ಯ ಎಸಗಲು ಆರೆಸ್ಸೆಸ್ ಸಿದ್ಧಾಂತವೇ ಪ್ರೇರಣೆ ನೀಡಿದೆ. ಈ ಆರೆಸ್ಸೆಸ್ ಸಿಂದ್ಧಾಂತವನ್ನು ಮೋದಿ, ಅಮಿತ್ ಷಾ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದಾರೆ ಹೇಳಿದ್ದಾರೆ. ಶೂ ಎಸೆದಿರುವ ವಕೀಲನ ಮೇಲೆ ದೇಶದ್ರೋಹದ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಮೋದಿಯವರು ಪ್ರತಿಪಾದಿಸುತ್ತ ಬಂದಿರುವ ಆರೆಸ್ಸೆಸ್ ಸಿದ್ಧಾಂತ ಆತನಿಗೆ ಇಂತಹ ಕೃತ್ಯ ಎಸಗಲು ನೈತಿಕ ಸ್ಥೈರ್ಯ ನೀಡಿದೆ ಎಂದು ಅವರು ಆರೋಪಿಸಿದರು. ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯನ್ನು ಕಿತ್ತುಹಾಕಿ, ಮನುಸ್ಮೃತಿಯನ್ನು ಸ್ಥಾಪಿಸುವ ಷಡ್ಯಂತರದ ಭಾಗವಾಗಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಅವರು ಹೇಳಿದರು. ಅವರ ಸೈದಾಂತಿಕ ನಿಲುವು, ಆಡಳಿತ ವರ್ಗಕ್ಕೆ ನೀಡುತ್ತಿರುವ ತೀಕ್ಷ್ಣ ಪ್ರತಿಕ್ರಿಯೆಗಳನ್ನು ದಮನಿಸುವ ಸಲುವಾಗಿಯೇ ಇಂತಹ ಕೃತ್ಯಗಳು ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಕೃತ್ಯದಲ್ಲಿ ನೇರ ಭಾಗಿ ಆಗಿರುವ ವಕೀಲನ ಜೊತೆಗೆ ಇದಕ್ಕೆ ಪರೋಕ್ಷ ಬೆಂಬಲ ನೀಡಿರುವ ಮೋದಿ, ಅಮಿತ್ ಷಾ, ಮೋಹನ್ ಭಾಗವತ್ ಅವರನ್ನು ಕಾನೂನಿನ ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು.

ಗವಾಯಿ ದಲಿತ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ : ಡಾ.ಸಿ.ಎಸ್.ದ್ವಾರಕಾನಾಥ್

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿಎಸ್ ದ್ವಾರಕಾನಾಥ್ ಅವರು, ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ದಲಿತರು ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ.

"ಈ ಘಟನೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಕುಣಿಕೆಗೆ ಸಿಲುಕಿಸುವ ಮೂಲಕ ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕಿದೆ" ಎಂದು ಆಗ್ರಹಿಸಿದ್ದಾರೆ.

"ಸನಾತನವಾದ ಮತ್ತು ಅಂಬೇಡ್ಕರ್ ವಾದ ಎರಡೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ" ಎಂದ ಅವರು, ಸರ್ಕಾರದ ಬೆಂಬಲ ಇದೆ ಎಂಬ ಆತನ ಆಶಾಭಾವನೆಯೇ ಈ ಘಟನೆ ನಡೆಯಲು ಕಾರಣ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News