×
Ad

ಅಳಂದದಲ್ಲಿ ಮತಗಳ್ಳತನ ಕುರಿತು ರಾಹುಲ್ ಗಾಂಧಿ ಆರೋಪ ತಳ್ಳಿಹಾಕಿದ ಚುನಾವಣಾ ಆಯೋಗ

Update: 2025-09-18 15:07 IST

Photo credit: PTI

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಮಾಡಿದ ಮತದಾರರ ಹೆಸರು ಅಳಿಸುವಿಕೆ ಮತ್ತು ಮತ ಕಳ್ಳತನದ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗ ತಿರಸ್ಕರಿಸಿದೆ. ಆಯೋಗವು ಈ ಆರೋಪಗಳನ್ನು “ತಪ್ಪು ಮತ್ತು ಆಧಾರರಹಿತ” ಎಂದು ಹೇಳಿದ್ದು, ಮತದಾರರ ಹೆಸರನ್ನು ಸಾರ್ವಜನಿಕರು ಆನ್‌ಲೈನ್ ಮೂಲಕ ಅಳಿಸಲು ಸಾಧ್ಯವಿಲ್ಲವೆಂದೂ ತಿಳಿಸಿದೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಕಾನೂನುಬದ್ಧವಾಗಿದ್ದು, ಸಂಬಂಧಿತ ವ್ಯಕ್ತಿಗೆ ಮಾಹಿತಿ ನೀಡದೆ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ ಎಂದು ಆಯೋಗ ಒತ್ತಿ ಹೇಳಿದೆ. ಆದರೆ, ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರ ಹೆಸರನ್ನು ಅಳಿಸಲು ವಿಫಲ ಪ್ರಯತ್ನಗಳು ನಡೆದಿರುವುದನ್ನು ಒಪ್ಪಿಕೊಂಡು, ಈ ಸಂಬಂಧ ತನಿಖೆಗಾಗಿ ಸ್ವತಃ ಎಫ್‌ಐಆರ್ ದಾಖಲಿಸಿರುವುದಾಗಿ ಆಯೋಗ ಸ್ಪಷ್ಟಪಡಿಸಿದೆ.

ರಾಹುಲ್ ಗಾಂಧಿ, ಸಾಫ್ಟ್‌ವೇರ್ ಮತ್ತು ರಾಜ್ಯದ ಹೊರಗಿನಿಂದ ಫೋನ್ ಸಂಖ್ಯೆಗಳ ನೆರವಿನಿಂದ ಅಳಂದ ಕ್ಷೇತ್ರದಲ್ಲಿ 6,018 ಮತಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಬಳಸಲಾದ ಮೊಬೈಲ್ ಸಂಖ್ಯೆಗಳ ವಿವರಗಳನ್ನೂ ಅವರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಕಾಂಗ್ರೆಸ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮತದಾರರ ಹೆಸರನ್ನು ಅಳಿಸುವಿಕೆಯ ಯತ್ನ ನಡೆದಿರುವುದಾಗಿ ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ, ಹಿರಿಯ ಕಾಂಗ್ರೆಸ್ ನಾಯಕಿ ಗೋದಾಬಾಯಿ ಅವರ ಹೆಸರಿನಲ್ಲಿ ನಕಲಿ ಲಾಗಿನ್ ಸೃಷ್ಟಿಸಿ 12 ಮತದಾರರನ್ನು ಅಳಿಸಲು ಪ್ರಯತ್ನಿಸಲಾಗಿದೆ ಎಂಬ ಉದಾಹರಣೆಯನ್ನು ಗಾಂಧಿ ಮಂಡಿಸಿದರು. “ಗೋದಾಬಾಯಿಯವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ,” ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ವಿವಾದಿತ ಅಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ 10,000 ಕ್ಕೂ ಹೆಚ್ಚು ಮತಗಳಿಂದ ಜಯ ಸಾಧಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ, “ಮುಖ್ಯ ಚುನಾವಣಾ ಆಯುಕ್ತರು ಮತ ಕಳ್ಳರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ. ಕಳೆದ 18 ತಿಂಗಳುಗಳಲ್ಲಿ ಕರ್ನಾಟಕ ಸಿಐಡಿ ಮತದಾರರ ಅಳಿಸುವಿಕೆ ಕುರಿತ ಅರ್ಜಿಗಳ ತಂತ್ರಜ್ಞಾನ ಸಂಬಂಧಿತ ಮಾಹಿತಿಗಾಗಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

“ಚುನಾವಣಾ ಆಯೋಗ ಅಗತ್ಯ ಮಾಹಿತಿಯನ್ನು ಮರೆಮಾಚುತ್ತಿದೆ. ಇದು ಕಾರ್ಯಾಚರಣೆಯ ಮೂಲವನ್ನೇ ಬಹಿರಂಗಪಡಿಸಬಹುದಾದ ಕಾರಣ ಜ್ಞಾನೇಶ್ ಕುಮಾರ್ ತಪ್ಪಿತಸ್ಥರನ್ನು ರಕ್ಷಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ,” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News