ಪಕ್ಷದ ಅಭಿಪ್ರಾಯಗಳನ್ನು ಆಕ್ರಮಣಕಾರಿಯಾಗಿ ಮಂಡಿಸಿ, ಬಿಜೆಪಿ ಬಣ್ಣ ಬಯಲು ಮಾಡಿ: ಕಾಂಗ್ರೆಸ್ ವಕ್ತಾರರಿಗೆ ರಾಹುಲ್ ಗಾಂಧಿ ಸೂಚನೆ
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಸುದ್ದಿ ವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪಕ್ಷದ ವಕ್ತಾರರು ಪಕ್ಷದ ಅಭಿಪ್ರಾಯಗಳನ್ನು ಆಕ್ರಮಣಕಾರಿಯಾಗಿ ಮಂಡಿಸಿ, ಬಿಜೆಪಿಯ ಬಣ್ಣ ಬಯಲು ಮಾಡಬೇಕೇ ಹೊರತು, ಅವರು ಬೀಸಿದ ಬಲೆಗೆ ಬೀಳಕೂಡದು ಎಂದು ಲೋಕಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ವಕ್ತಾರರಿಗೆ ಸೂಚನೆ ನೀಡಿದ್ದಾರೆ.
ಹೊಸದಿಲ್ಲಿಯ ಇಂದಿರಾ ಭವನದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಒತ್ತಡಕ್ಕೆ ಮಣಿದು ಜಾತಿ ಜನಗಣತಿ ನಡೆಸಲು ಒಪ್ಪಿಗೆ ಸೂಚಿಸಿದೆ. ಇದರ ಲಾಭ ಕಾಂಗ್ರೆಸ್‌ಗೆ ಆಗುವಂತೆ ನೋಡಿಕೊಳ್ಳಬೇಕು" ಎಂದು ಕರೆ ನೀಡಿದ್ದಾರೆ.
"ಸುದ್ದಿ ವಾಹಿನಿಗಳಲ್ಲಿನ ಚರ್ಚಾ ಸ್ವರೂಪವು ನಮ್ಮ ವಿರುದ್ಧವಾಗಿದೆ ಎಂದು ನನಗೆ ಅನ್ನಿಸುತ್ತಿದೆ. ಕೆಲವು ಚರ್ಚಾ ಕಾರ್ಯಕ್ರಮಗಳನ್ನು ಬಿಜೆಪಿಗೆ ಅನುಕೂಲಕರವಾಗಿರುವಂತೆಯೇ ಸಿದ್ದಪಡಿಸಲಾಗಿರುತ್ತದೆ. ಇದರೊಂದಿಗೆ, ಚರ್ಚೆಯ ವೇಳೆ ಬಿಜೆಪಿ ಪರವಾಗಿರುವ ಪತ್ರಕರ್ತರು ಹಾಗೂ ವಿಶ್ಲೇಷಕರೇ ಇರುತ್ತಾರೆ. ಆದರೆ, ಇಂತಹ ಸಮಯದಲ್ಲಿ ನಮ್ಮ ಪಕ್ಷದ ವಕ್ತಾರರು ವಿಚಲಿತರಾಗಬೇಕಾದ ಅಗತ್ಯವಿಲ್ಲ. ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿದೆ" ಎಂದು ಅವರು ಪ್ರಶಂಸಿಸಿದ್ದಾರೆ.
"ಕಾಂಗ್ರೆಸ್ಸಿಗರಾದ ನಾವು ಬಿಜೆಪಿಗಿಂತ ಭಿನ್ನ ನಿಲುವು ಹೊಂದಿದ್ದೇವೆ. ಏಕೆಂದರೆ, ನಮಗೆ ಸತ್ಯ ಮತ್ತು ಇತಿಹಾಸದ ಬಗ್ಗೆ ಅರಿವಿದೆ. ಇದೇ ವಿಚಾರವನ್ನು ಎಲ್ಲ ಸಂದರ್ಭಗಳಲ್ಲೂ ಅನುಸರಿಸಬೇಕು" ಎಂದು ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ.
"ನೀವು (ಕಾಂಗ್ರೆಸ್ ವಕ್ತಾರರು) ಕಡಿಮೆ ಜ್ಞಾನವುಳ್ಳ ನಾಯಕರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಆದರೆ, ನೀವು ಅವರ ಮಟ್ಟಕ್ಕೆ ಇಳಿಯಬೇಕಾದ ಅಗತ್ಯವಿಲ್ಲ. ಬದಲಾಗಿ ಪಕ್ಷದ ನಿಲುವನ್ನು ಬಲವಾಗಿ ಮಂಡಿಸಬೇಕು. ಕೆಲವೊಮ್ಮೆ ದೊಡ್ಡ ಗೆಲುವುಗಳನ್ನು ಸಾಧಿಸಬೇಕಾದರೆ, ಕೆಲವು ವೈಯಕ್ತಿಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.