ಭಾರತ ಬಂದ್ | ವಿವಿಧೆಡೆ ಜನಜೀವನ ಅಸ್ತವ್ಯಸ್ತ
PC : PTI
ಹೊಸದಿಲ್ಲಿ: ಹತ್ತು ಕೇಂದ್ರೀಯ ಕಾರ್ಮಿಕ ಒಕ್ಕೂಟಗಳು ಬುಧವಾರ ಕರೆ ನೀಡಿದ ಭಾರತ ಬಂದ್ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಸಾರಿಗೆ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದೇಶಾದ್ಯಂತ ಹಲವೆಡೆ ಬ್ಯಾಂಕ್ ಗಳು ಕಾರ್ಯಾಚರಿಸಲಿಲ್ಲ. ಕೇಂದ್ರ ಸರಕಾರದ ವಿವಾದಾತ್ಮಕ ಕಾರ್ಮಿಕ ನೀತಿಗಳನ್ನು ಪ್ರತಿಭಟಿಸಿ ಭಾರತ ಬಂದ್ ಗೆ ಕರೆ ನೀಡಲಾಗಿತ್ತು.
.ಕೇರಳ ಹಾಗೂ ಪಶ್ಚಿಮಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಭಾರತ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ರಾಜ್ಯಾದ್ಯಂತ ಸರಕಾರಿ ಹಾಗೂ ಖಾಸಗಿ ಸಾರಿಗೆ ಬಸ್ ಗಳು ರಸ್ತೆಗಿಳಿಯದೆ ಇದ್ದುದರಿಂದ ಸಹಸ್ರಾರು ಪ್ರಯಾಣಿಕರು ತೊಂದರೆಗೊಳಾಗದರು. ಕೊಟ್ಟಾಯಂ, ತಿರುವನಂತಪುರ ಮತ್ತಿತರ ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದವು. ಪಶ್ಚಿಮಬಂಗಾಳದ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಪ್ರತಿಭಟನಾ ನಿರತ ಎಡಪಂಥೀಯ ಸಂಘಟನೆಗಳ ಬೆಂಬಲಿಗರು ರಾಜ್ಯದ ವಿವಿಧೆಡೆ ಟಿಎಂಸಿ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಘಟನೆಗಳು ವರದಿಯಾಗಿವೆ.ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಬ್ಯಾಂಕ್ ನೌಕರರು ಸಾರ್ವಜನಿಕ ರಂಗದ ಬ್ಯಾಂಕ್ಗಳ ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಜಧಾನಿ ದಿಲ್ಲಿಯಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಎಲ್ಲಾ ಮಾರುಕಟ್ಟೆ ಪ್ರದೇಶಗಳು ಎಂದಿನಂತೆ ಕಾರ್ಯಾಚರಿಸಿವೆ.
ದಕ್ಷಿಣದ ರಾಜ್ಯವಾದ ತಮಿಳುನಾಡಿನ ಮದುರೈ ರೈಲು ನಿಲ್ದಾಣ ಜಂಕ್ಷನ್ನ ಮುಂಭಾಗದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರ ರಾಸ್ತಾ ರೋಕೋ ನಡೆಸಿದರು.
ಮದುರೈ ರೈಲು ನಿಲ್ದಾಣದ ಮುಂಭಾಗದಲ್ಲಿ ನಡೆದ ರಾಸ್ತಾ ರೋಕೋ ಪ್ರತಿಭಟನೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಅಸ್ಸಾಂನಲ್ಲಿ ಭಾರತ ಬಂದ್ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳು ಸಂಚಾರವನ್ನು ಸ್ಥಗಿತಗೊಳಿಸಿದವು. ಚಹಾತೋಟ ಕಾರ್ಮಿಕರು ಸೇರಿದಂತೆ ಹಲವಾರು ಶ್ರಮಿಕ ಸಂಘಟನೆಗ ಸದಸ್ಯರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು ತೆಲಂಗಾಣದಲ್ಲಿ ಸಿಜಿಟಿಯು ಕಾರ್ಮಿಕರು ಬೃಹತ್ ಬೈಕ್ ರ‍್ಯಾಲಿ ನಡೆಸಿದರು. ಒಡಿಶಾದ ಭುವನೇಶ್ವರದಲ್ಲಿ ಕಾರ್ಮಿಕ ಒಕ್ಕೂಟಗಳು ರಸ್ತೆ ತಡೆ ನಡೆಸಿದವು. ಧನಬಾದ್ ನಲ್ಲಿ ವಾಹನಸಂಚಾರ ಸ್ಥಗಿತಗೊಂಡವು.