×
Ad

ಬಿಹಾರ: ಆಧಾರ್ ಜೊತೆ ಅಹವಾಲು ಸಲ್ಲಿಸಲು ತೊಂದರೆಗೊಳಗಾದ ಮತದಾರರಿಗೆ ಸಿಇಒ ಸೂಚನೆ

Update: 2025-08-19 21:48 IST

PC : PTI 

ಪಾಟ್ನಾ: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯ ಮೊದಲ ಹಂತದಲ್ಲಿ ಹೆಸರುಗಳನ್ನು ಅಳಿಸಲಾದ 65 ಲಕ್ಷಕ್ಕೂ ಅಧಿಕ ಮತದಾರರ ವಿವರಗಳನ್ನು ಚುನಾವಣಾ ಆಯೋಗವು ಪ್ರಕಟಿಸಿದ ಬೆನ್ನಲ್ಲೇ ಬಿಹಾರದ ಮುಖ್ಯ ಚುನಾವಣಾಧಿಕಾರಿ(ಸಿಇಒ) ವಿನೋದಸಿಂಗ್ ಗುಂಜಿಯಾಲ್ ಅವರು ಸೋಮವಾರ ಸಂಜೆ ಅಧಿಸೂಚನೆಯೊಂದನ್ನು ಹೊರಡಿಸಿ ಹೆಸರು ಸೇರ್ಪಡೆಗಾಗಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಅಹವಾಲುಗಳನ್ನು ಸಲ್ಲಿಸುವಂತೆ ತೊಂದರೆಗೊಳಗಾದ ಮತದಾರರಿಗೆ ಸೂಚಿಸಿದ್ದಾರೆ.

ಆ.1ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಗಳಿಂದ ಹೆಸರುಗಳ ಅಳಿಸುವಿಕೆಯನ್ನು ಪ್ರಶ್ನಿಸಲು ಆಧಾರ್ ಕಾರ್ಡ್‌ಗಳನ್ನು ಪುರಾವೆಯಾಗಿ ಸ್ವೀಕರಿಸುವಂತೆ ಚುನಾವಣಾ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ.

ಕರಡು ಪಟ್ಟಿಗಳಿಂದ ಹೆಸರುಗಳನ್ನು ಕೈಬಿಡಲಾಗಿರುವ ಎಲ್ಲ ಮತದಾರರು ತಮ್ಮ ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿ(ಎಪಿಕ್)ಯ ಸಂಖ್ಯೆಯ ಮೂಲಕ ಪಟ್ಟಿಯಲ್ಲಿ ತಮ್ಮ ನಮೂದು ಮತ್ತು ಕಾರಣದ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು. ಆ.1ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿರದ ಮತದಾರರ ಪಟ್ಟಿಯನ್ನು

ಎಲ್ಲ ಬ್ಲಾಕ್ ಕಚೇರಿಗಳು,ಪಂಚಾಯತ್ ಕಚೇರಿಗಳು, ಮುನ್ಸಿಪಲ್ ಕಚೇರಿಗಳು ಮತ್ತು ಮತಗಟ್ಟೆಗಳಲ್ಲಿ ಪ್ರದರ್ಶಿಸಲಾಗಿದ್ದು,ಅಂತಹ ಮತದಾರರು ತಮ್ಮ ನಮೂದು ಮತ್ತು ಕಾರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅತೃಪ್ತ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಬಿಹಾರ ಸಿಇಒ ತಿಳಿಸಿದ್ದಾರೆ.

ನೊಂದ ಮತದಾರರು ಆಯಾ ಕಚೇರಿಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಲು ನಿಗದಿತ ನಮೂನೆಯಲ್ಲಿ ವಿವರವಾದ ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದು. ಮತದಾರರ ಹಕ್ಕು ಕೋರಿಕೆಗಳನ್ನು ಸೆ.1ರವರೆಗೆ ಸ್ವೀಕರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News