ಕಾಂಗ್ರೆಸ್ ಶಾಸಕ ರಫೀಕ್ ಖಾನ್ ರನ್ನು ʼಪಾಕಿಸ್ತಾನಿʼ ಎಂದ ಬಿಜೆಪಿ ಶಾಸಕ; ರಾಜಸ್ಥಾನ ವಿಧಾನಸಭೆಯಲ್ಲಿ ಕೋಲಾಹಲ
ಸಾಂದರ್ಭಿಕ ಚಿತ್ರ (PTI)
ಜೈಪುರ: ಶುಕ್ರವಾರ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ರಫೀಕ್ ಖಾನ್ ರನ್ನು ಬಿಜೆಪಿ ಶಾಸಕ ಗೋಪಾಲ್ ಶರ್ಮಾ ʼಪಾಕಿಸ್ತಾನಿʼ ಎಂದು ಕರೆದಿದ್ದು, ಇದರಿಂದ ರಾಜಸ್ಥಾನ ವಿಧಾನಸಭೆಯಲ್ಲಿ ಕೋಲಾಹಲದ ನಿರ್ಮಾಣವಾಯಿತು. ಅವರ ಹೇಳಿಕೆಯನ್ನು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಶಾಸಕರು ತೀವ್ರವಾಗಿ ಪ್ರತಿಭಟಿಸಿದರು.
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಇಲಾಖೆಗೆ ಅನುದಾನ ಮಂಜೂರಾತಿ ಬೇಡಿಕೆಯ ಕುರಿತು ಚರ್ಚೆ ನಡೆದ ವೇಳೆ ಈ ಘಟನೆ ನಡೆದಿದ್ದು, ಜೈಪುರದ ಸಿವಿಲ್ ಲೈನ್ ಶಾಸಕರಾದ ಗೋಪಾಲ್ ಶರ್ಮ, ಜೈಪುರದ ಆದರ್ಶನಗರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಫೀಕ್ ವಿರುದ್ಧ ಈ ಹೇಳಿಕೆ ನೀಡಿದ್ದಾರೆ.
ರಫೀಕ್ ಖಾನ್ ಅವರು ಕಾಂಗ್ರೆಸ್ ಸರಕಾರ ಹಾಗೂ ಬಿಜೆಪಿ ಸರಕಾರವನ್ನು ಹೋಲಿಕೆ ಮಾಡುವಾಗ ಶರ್ಮ ʼಪಾಕಿಸ್ತಾನಿʼ ಎಂದು ಕರೆದಿದ್ದಾರೆ. ಒಂದು ಹಂತದಲ್ಲಿ ಗೋಪಾಲ್ ಶರ್ಮಾರನ್ನು ಪರೋಕ್ಷವಾಗಿ ಉಲ್ಲೇಖಿಸಿದ ರಫೀಕ್ ಖಾನ್, ಅವರಿಗೆ ಕೊಂಚ ತಿಳಿ ಹೇಳುವಂತೆ ವಿಧಾನಸಭಾ ಸ್ಪೀಕರ್ ಗೆ ಮನವಿ ಮಾಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ವಿಧಾನಸಭಾ ಸ್ಪೀಕರ್ ಸಂದೀಪ್ ಶರ್ಮಾ, ಗೋಪಾಲ್ ಶರ್ಮಾರಿಗೆ ಆಸೀನರಾಗುವಂತೆ ಸೂಚಿಸಿದರು. ಈ ವೇಳೆ, “ಇದೇನಿದು? ಇದೇನು ತಮಾಷೆಯೆ? ಓರ್ವ ವ್ಯಕ್ತಿ ಏನು ಬೇಕಾದರೂ ಮಾತನಾಡಬಹುದೆ?” ಎಂದು ವಿರೋಧ ಪಕ್ಷಗಳ ನಾಯಕ ಟೀಕಾ ರಾಮ್ ಜುಲ್ಲಿ ತರಾಟೆಗೆ ತೆಗೆದುಕೊಂಡರು.
ಗೌರವ ಮತ್ತು ಘನತೆಗೆ ಈ ರೀತಿ ಧಕ್ಕೆಯನ್ನುಂಟು ಮಾಡುವುದು ತಪ್ಪು ಎಂದೂ ಅವರು ಆಕ್ಷೇಪಿಸಿದರು.
ಗೋಪಾಲ್ ಶರ್ಮಾ ಅವರು ರಫೀಕ್ ಖಾನ್ ವಿರುದ್ಧ ಇಂತಹ ಭಾಷೆ ಬಳಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸುಮಾರು ಇದೇ ವೇಳೆಯಲ್ಲಿ ಹೆರಿಟೇಜ್ ನಲ್ಲಿ ನಡೆದಿದ್ದ ಜೈಪುರ ಮಹಾನಗರ ಪಾಲಿಕೆಯ ಮಂಡಳಿ ಸಭೆಯಲ್ಲೂ ರಫೀಕ್ ರೊಂದಿಗೆ ಗೋಪಾಲ್ ಶರ್ಮಾ ವಾಗ್ವಾದ ನಡೆಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಗೋಪಾಲ್ ಶರ್ಮ, ನಾನು ಜೈಪುರವನ್ನು ಮಿನಿ ಪಾಕಿಸ್ತಾನವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಇದರಿಂದ ಎರಡೂ ಪಕ್ಷಗಳ ಕೌನ್ಸಿಲರ್ ಗಳ ನಡುವೆ ಘರ್ಷಣೆಯುಂಟಾಗಿತ್ತು. ನಂತರ ಮಾತನಾಡಿದ್ದ ಗೋಪಾಲ್ ಶರ್ಮ, ರಫೀಕ್ ಖಾನ್ ಜೈಪುರದ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.