ʼರಷ್ಯಾದ ಏಜೆಂಟರುʼ : 150 ಕಾಂಗ್ರೆಸ್ ಸಂಸದರು ರಷ್ಯಾದಿಂದ ʼನಿಧಿʼ ಪಡೆದಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ
ಬಿಜೆಪಿ ಸಂಸದ ನಿಶಿಕಾಂತ್ ದುಬೆ (PTI)
ಹೊಸದಿಲ್ಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅಮೆರಿಕದ ಗುಪ್ತಚರ ಸಂಸ್ಥೆʼ ಸಿಐಎʼ 2011ರಲ್ಲಿ ಬಿಡುಗಡೆ ಮಾಡಿದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿವಂಗತ ಎಚ್‌ಕೆಎಲ್ ಭಗತ್ ಸಹಿತ 150ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರಿಗೆ ಸೋವಿಯತ್ ಒಕ್ಕೂಟ ʼನಿಧಿʼ(ಹಣಕಾಸಿನ ನೆರವು) ನೀಡಿದೆ. ಅವರು ರಷ್ಯಾದ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಿದ್ದರು ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ʼಕಾಂಗ್ರೆಸ್, ಭ್ರಷ್ಟಾಚಾರ ಮತ್ತು ಗುಲಾಮಗಿರಿʼ ಎಂಬ ರಹಸ್ಯ ದಾಖಲೆಯನ್ನು 2011ರಲ್ಲಿ ಸಿಐಎ ಬಿಡುಗಡೆ ಮಾಡಿತ್ತು. ಅದರ ಪ್ರಕಾರ, ದಿವಂಗತ ಕಾಂಗ್ರೆಸ್ ನಾಯಕ ಎಚ್‌ಕೆಎಲ್ ಭಗತ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರಿಗೆ ಸೋವಿಯತ್ ರಷ್ಯಾದಿಂದ ಹಣಕಾಸು ನೆರವು ದೊರೆತಿದೆ. ಅವರು ರಷ್ಯಾದ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಪತ್ರಕರ್ತರ ಗುಂಪೊಂದು ಅವರ ʼಏಜೆಂಟ್ʼಗಳು. ಅವರು ಹಂಚಿಕೊಂಡ ದಾಖಲೆಯಲ್ಲಿ ರಷ್ಯಾ ಪ್ರಕಟಿಸಿದ 16,000 ಸುದ್ದಿ ಲೇಖನಗಳ ಪಟ್ಟಿ ಇದೆ ಎಂದು ದುಬೆ ಹೇಳಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಯ 1,100 ಜನರು ಭಾರತದಲ್ಲಿದ್ದರು. ಅವರು ಅಧಿಕಾರಿಗಳು, ವ್ಯಾಪಾರ ಸಂಸ್ಥೆಗಳು, ಕಮ್ಯುನಿಸ್ಟ್ ಪಕ್ಷಗಳು ಮತ್ತು ಅಭಿಪ್ರಾಯ ರೂಪಿಸುವವರನ್ನು ತಮ್ಮ "ಜೇಬಿನಲ್ಲಿ" ಇಟ್ಟುಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ʼಸೋವಿಯತ್ ಒಕ್ಕೂಟದ ಆಡಳಿತಾವಧಿಯಲ್ಲಿ ಚುನಾವಣೆಗಳ ಹೆಸರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭದ್ರಾ ಜೋಶಿ ಜರ್ಮನ್ ಸರಕಾರದಿಂದ 5 ಲಕ್ಷ ರೂ.ಗಳನ್ನು ಪಡೆದರು ಮತ್ತು ಸೋತ ನಂತರ, ಇಂಡೋ-ಜರ್ಮನ್ ವೇದಿಕೆಯ ಅಧ್ಯಕ್ಷರಾದರು. ಇದು ಒಂದು ದೇಶವೇ ಅಥವಾ ಗುಲಾಮರು, ಏಜೆಂಟರು ಮತ್ತು ಮಧ್ಯವರ್ತಿಗಳ ಕೈಗೊಂಬೆಯೇ? ಈ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕು, ಇಂದು ಇದರ ಬಗ್ಗೆ ತನಿಖೆ ನಡೆಯಬೇಕೇ ಅಥವಾ ಬೇಡವೇ?ʼ ಎಂದು ನಿಶಿಕಾಂತ್ ದುಬೆ ತಮ್ಮ 'ಎಕ್ಸ್' ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.