ಕೇರಳದಲ್ಲಿ ನಿಂತಿದ್ದ ಬ್ರಿಟನ್ ಯುದ್ಧ ವಿಮಾನ ಕೊನೆಗೂ ಟೇಕಾಫ್
PC : indiatoday.in
ತಿರುವನಂತಪುರ, ಜುಲೈ 22: ತಾಂತ್ರಿಕ ದೋಷದಿಂದಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬ್ರಿಟನ್‌ನ ಎಫ್-35ಬಿ ಯುದ್ಧ ವಿಮಾನ ಕೊನೆಗೂ ಮಂಗಳವಾರ ಬೆಳಿಗ್ಗೆ ಯಶಸ್ವಿಯಾಗಿ ಟೇಕ್ ಆಫ್ ಆಗಿದೆ.
ಈ ಯುದ್ಧ ವಿಮಾನವು ಜೂನ್ 14 ರಂದು ತಾಂತ್ರಿಕ ದೋಷದ ಕಾರಣ ತುರ್ತು ಲ್ಯಾಂಡಿಂಗ್ ಮಾಡಿತ್ತು. ನಂತರ ವಿಮಾನವನ್ನು ದುರಸ್ತಿ ಮಾಡುವ ಪ್ರಕ್ರಿಯೆ ನಡೆಯಿತು. ಇದರಿಂದಾಗಿ ಎಫ್-35ಬಿ
ವಿಮಾನವು ವಿಮಾನ ನಿಲ್ದಾಣದಲ್ಲಿಯೇ ನಿಂತಿತ್ತು.
ಮಂಗಳವಾರ ಬೆಳಿಗ್ಗೆ 10.50ಕ್ಕೆ, ಬ್ರಿಟಿಷ್ ರಾಯಲ್ ನೇವಿಗೆ ಸೇರಿದ ಈ ಎಫ್-35ಬಿ ವಿಮಾನವು ಆಸ್ಟ್ರೇಲಿಯಾದ ಡಾರ್ವಿನ್ ಕಡೆಗೆ ತನ್ನ ಪ್ರಯಾಣ ಆರಂಭಿಸಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
110 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹948 ಕೋಟಿ) ಮೌಲ್ಯದ ಈ ಎಫ್-35ಬಿ ಯುದ್ಧ ವಿಮಾನವು, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ವಿಶೇಷ ರಹಸ್ಯ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಕಮ್ಯುಫ್ಲಾಜ್, ರಡಾರ್ ತಪ್ಪಿಸುವ ಸಾಮರ್ಥ್ಯ ಹಾಗೂ ತೀವ್ರ ದಾಳಿ ನಡೆಸುವ ಸಾಮರ್ಥ್ಯಗಳ ಮೂಲಕ ಈ ವಿಮಾನವು ಆಧುನಿಕ ಯುದ್ಧ ತಂತ್ರಜ್ಞಾನವನ್ನು ಹೊಂದಿದೆ.