×
Ad

ಅಮೆರಿಕದಲ್ಲಿ ಕಳ್ಳತನ ಮಾಡಿದ ಭಾರತೀಯ ಮಹಿಳೆ | ವಿದೇಶಗಳಲ್ಲಿ ಉತ್ತಮವಾಗಿ ನಡೆದುಕೊಳ್ಳಿ: ಕೇಂದ್ರ

Update: 2025-07-18 20:48 IST
PC : NDTV 

ಹೊಸದಿಲ್ಲಿ,ಜು.18: ತಾವಿರುವ ನೆಲದ ಕಾನೂನುಗಳನ್ನು ಪಾಲಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ವಿದೇಶಗಳಲ್ಲಿಯ ಭಾರತೀಯ ಪ್ರಜೆಗಳನ್ನು ಕೇಳಿಕೊಂಡಿದೆ. ಅಮೆರಿಕದ ಮಾಲ್ ವೊಂದರಲ್ಲಿ ಹಲವಾರು ವಸ್ತುಗಳನ್ನು ಕಳವು ಮಾಡಿ ಪೋಲಿಸರ ಕೈಗೆ ಸಿಕ್ಕಿಬಿದ್ದ ಭಾರತೀಯ ಮಹಿಳೆಯ ವೀಡಿಯೊ ವೈರಲ್ ಆದ ಬೆನ್ನಿಗೇ ಸರಕಾರದ ಈ ಸಂದೇಶ ಹೊರಬಿದ್ದಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ವೈರಲ್ ಆಗಿರುವ ವೀಡಿಯೊ ಕುರಿತು ಪ್ರಶ್ನೆಗೆ ಉತ್ತರಿಸಿದ ಎಂಇಎ ವಕ್ತಾರ ರಣದೀಪ ಜೈಸ್ವಾಲ್ ಅವರು,ಯಾವುದೇ ದೇಶದಲ್ಲಿ ವಾಸವಾಗಿರುವವರು,ಅವರು ಆ ದೇಶದ ಪ್ರಜೆಯಾಗಿರಲಿ ಅಥವಾ ವಿದೇಶಿ ಪ್ರಜೆಯಾಗಿರಲಿ,ಅಲ್ಲಿಯ ಕಾನೂನುಗಳನ್ನು ಪಾಲಿಸುವುದು ಅವರ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

‘ನಮ್ಮ ಜನರು ವಿದೇಶಕ್ಕೆ ಹೋದಾಗಲೆಲ್ಲ,ತಮಗಾಗಿ ಒಳ್ಳೆಯ ಮತ್ತು ಧನಾತ್ಮಕ ವರ್ಚಸ್ಸನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಮೂಲಕ ನಮ್ಮ ದೇಶದ ಉತ್ತಮ ವರ್ಚಸ್ಸನ್ನೂ ಬಿಂಬಿಸುವಂತಾಗಲು ಆ ದೇಶದ ಕಾನೂನುಗಳನ್ನು ಗೌರವಿಸುವಂತೆ ಮತ್ತು ಪಾಲಿಸುವಂತೆ ನಾವು ಅವರನ್ನು ಯಾವಾಗಲೂ ಒತ್ತಾಯಿಸುತ್ತೇವೆ’ ಎಂದರು.

ಅಮೆರಿಕ ಪ್ರವಾಸದಲ್ಲಿದ್ದ ಭಾರತೀಯ ಮಹಿಳೆ ಇಲಿನಾಯ್ಸ್ ನಲ್ಲಿಯ ಟಾರ್ಗೆಟ್ ಮಾಲ್ ನಲ್ಲಿ ಏಳು ಗಂಟೆಗೂ ಅಧಿಕ ಸಮಯ ಸುತ್ತಾಡಿ 1,300 ಡಾಲರ್ (ಸುಮಾರು 1.1 ಲಕ್ಷ ರೂಪಾಯಿ)ಮೌಲ್ಯದ ವಸ್ತುಗಳನ್ನು ಎತ್ತಿಕೊಂಡಿದ್ದಳು. ಬಳಿಕ ಹಣವನ್ನು ಪಾವತಿಸದೆ ಮಾಲ್ ನಿಂದ ಹೊರಹೋಗಲು ಪ್ರಯತ್ನಿಸಿದ್ದಳು.

ಕಳೆದ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು, ಟಾರ್ಗೆಟ್ ಉದ್ಯೋಗಿಯೋರ್ವರು ಮಹಿಳೆಯೊಂದಿಗೆ ಜಗಳವಾಡಿದ ವೀಡಿಯೊ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

ವಸ್ಯುಗಳ ಮೌಲ್ಯವನ್ನು ಪಾವತಿಸುತ್ತೇನೆ, ತನ್ನನ್ನು ಬಿಟ್ಟು ಬಿಡಿ ಎಂದು ಮಹಿಳೆ ಗೋಗರೆದಿದ್ದೂ ವೀಡಿಯೊದಲ್ಲಿ ದಾಖಲಾಗಿದೆ.

‘ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನಾನು ಈ ದೇಶದವಳಲ್ಲ, ನಾನು ಇಲ್ಲಿ ಉಳಿದುಕೊಳ್ಳುತ್ತಿಲ್ಲ’ ಎಂದು ಮಹಿಳೆ ಹೇಳಿಕೊಂಡಿದ್ದಳು.

ಆಕೆಯನ್ನು ವಿಚಾರಣೆ ನಡೆಸುತ್ತಿದ್ದ ಮಹಿಳಾ ಪೋಲಿಸ್ ಅಧಿಕಾರಿ ಇದಕ್ಕೆ ಪ್ರತಿಕ್ರಿಯಿಸಿ,‘ಭಾರತದಲ್ಲಿ ವಸ್ತುಗಳನ್ನು ಕದಿಯಲು ನಿಮಗೆ ಅನುಮತಿಯಿದೆಯೇ? ನನಗೆ ಹಾಗೆ ಅನ್ನಿಸುತ್ತಿಲ್ಲ ’ಎಂದು ಹೇಳಿದ್ದರು.

ಈ ನಡುವೆ ಭಾರತದಲ್ಲಿಯ ಅಮೆರಿಕದ ರಾಯಭಾರ ಕಚೇರಿಯು ವೀಸಾ ಎಚ್ಚರಿಕೆಯನ್ನು ಹೊರಡಿಸಿದ್ದು,ಅಮೆರಿಕದಲ್ಲಿ ಹಲ್ಲೆ,ಕಳ್ಳತನ ಅಥವಾ ಲೂಟಿ ಮಾಡಿದರೆ ಕಾನೂನು ಸಮಸ್ಯೆಗಳು ಎದುರಾಗುವುದು ಮಾತ್ರವಲ್ಲ,ಅದು ವೀಸಾ ರದ್ದುಗೊಳ್ಳಲೂ ಕಾರಣವಾಗಬಹುದು. ಇಂತಹ ಕೃತ್ಯಗಳಿಂದ ಭವಿಷ್ಯದಲ್ಲಿ ಯುಎಸ್ ವೀಸಾಗಳಿಗೆ ಅನರ್ಹಗೊಳ್ಳಬಹುದು ಮತ್ತು ದೇಶಕ್ಕೆ ಮರುಪ್ರವೇಶವನ್ನು ನಿರ್ಬಂಧಿಸಬಹುದು. ಅಮೆರಿಕವು ಕಾನೂನು ಮತ್ತು ಸುವ್ಯವಸ್ಥೆಯನ್ನು ಗೌರವಿಸುತ್ತದೆ ಹಾಗೂ ವಿದೇಶಿ ಸಂದರ್ಶಕರು ತನ್ನ ಎಲ್ಲ ಕಾನೂನುಗಳನ್ನು ಪಾಲಿಸಬೇಕು ಎಂದು ನಿರೀಕ್ಷಿಸುತ್ತದೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News