ವಿಪತ್ತು ಪೀಡಿತ 6 ರಾಜ್ಯಗಳಿಗೆ 1,066 ಕೋಟಿ ರೂ.; ಕೇಂದ್ರ ಸರಕಾರ ಅನುಮೋದನೆ
PC : PTI
ಹೊಸದಿಲ್ಲಿ: ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಅಡಿಯಲ್ಲಿ ಕೇಂದ್ರದ ಪಾಲಿನ ಭಾಗವಾಗಿ ನೆರೆ ಹಾಗೂ ಭೂಕುಸಿತ ಪೀಡಿತ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ಮಿರೆರಾಮ್, ಕೇರಳ ಹಾಗೂ ಉತ್ತರಾಖಂಡಗಳಿಗೆ 1,066.80 ಕೋಟಿ ರೂ. ಮಂಜೂರಾತಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ನೆರೆ, ಭೂಕುಸಿತ ಹಾಗೂ ಮೇಘ ಸ್ಫೋಟದಂತಹ ಎಲ್ಲಾ ಪರಿಸ್ಥಿತಿಗಳಲ್ಲಿಯೂ ನರೇಂದ್ರ ಮೋದಿ ಸರಕಾರ ರಾಜ್ಯ ಸರಕಾರದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.
ಹಣಕಾಸು ನೆರವು ಅಲ್ಲದೆ, ಅಗತ್ಯ ಇರುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಸೇನೆ ಹಾಗೂ ವಾಯು ಪಡೆಗಳ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದು ಸರಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ನೆರೆ ಪೀಡಿತ 6 ರಾಜ್ಯಗಳಲ್ಲಿ ಅಸ್ಸಾಂ 370.60 ಕೋಟಿ ರೂ., ಮಣಿಪುರ 29.90 ಕೋಟಿ ರೂ., ಮೇಘಾಲಯ 30.40 ಕೋಟಿ ರೂ., ಮಿರೆರಾಂ 22.80 ಕೋಟಿ ರೂ., ಕೇರಳ 153.23 ಕೋಟಿ ರೂ., ಉತ್ತರಾಖಂಡ 455.60 ಕೋಟಿ ರೂ.ವನ್ನು ಎಸ್ ಡಿ ಎಫ್ ನ ಕೇಂದ್ರದ ಭಾಗವಾಗಿ ಸ್ವೀಕರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ವರ್ಷ ನೈಋತ್ಯ ಮಂಗಾರು ಸಂದರ್ಭ ಈ ರಾಜ್ಯಗಳು ಭಾರೀ ಮಳೆ, ನೆರೆ ಹಾಗೂ ಭೂಕುಸಿತಗಳಿಂದ ಸಂತ್ರಸ್ತವಾಗಿವೆ. ಈ ವರ್ಷ ಮೋದಿ ಸರಕಾರ ವಿವಿಧ ರಾಜ್ಯಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ ಡಿ ಆರ್ ಎಫ್) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ ಡಿ ಆರ್ ಎಫ್)ಯಿಂದ 8,000 ಕೋಟಿ ರೂ.ಗೂ ಅಧಿಕ ನಿಧಿಯನ್ನು ಒದಗಿಸಿದೆ ಎಂದು ಹೇಳಿಕೆ ತಿಳಿಸಿದೆ.
ಕೇಂದ್ರ ಸರಕಾರ ಈಗಾಗಲೇ 14 ರಾಜ್ಯಗಳಿಗೆ ಎಸ್ ಡಿ ಆರ್ ಎಫ್ ನಿಂದ 6,166.00 ಕೋಟಿ ರೂ. ಹಾಗೂ 12 ರಾಜ್ಯಗಳಿಗೆ ಎನ್‌ಡಿಆರ್‌ಎಫ್‌ನಿಂದ 1,988.91 ಕೋಟಿ ರೂ. ಬಿಡುಗಡೆ ಮಾಡಿದೆ.
ಇದಲ್ಲದೆ, 5 ರಾಜ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್ ಡಿ ಎಂ ಎಫ್)ಯಿಂದ 760.20 ಕೋಟಿ ರೂ., 2 ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ ಡಿ ಎಂ ಎಫ್) ಯಿಂದ 17.55 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.
ಈ ಮುಂಗಾರು ಸಂದರ್ಭ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಿಗೆ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ನ 104 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.