×
Ad

ರಾಜಸ್ಥಾನ | ಪಕ್ಷದ ಶಾಸಕರ ಅಮಾನತು ಖಂಡಿಸಿ ರಾತ್ರಿಯೆಲ್ಲ ವಿಧಾನಸಭೆಯಲ್ಲಿ ಧರಣಿ ನಡೆಸಿದ ಕಾಂಗ್ರೆಸ್ ಶಾಸಕರು

Update: 2025-02-22 16:21 IST

Photo credit: PTI

ಜೈಪುರ: ಶುಕ್ರವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್ ನೀಡಿದ ಹೇಳಿಕೆಯ ವಿರುದ್ಧ ಸದನದಲ್ಲಿ ಪ್ರತಿಭಟನೆ ನಡೆಸಿದ ಗೋವಿಂದ್ ಸಿಂಗ್ ದೋತಸ್ರಾ ಸೇರಿದಂತೆ ಆರು ಮಂದಿ ಕಾಂಗ್ರೆಸ್ ಶಾಸಕರ ಅಮಾನತನ್ನು ಪ್ರತಿಭಟಿಸಿ ಕಾಂಗ್ರೆಸ್ ಶಾಸಕರು ಇಡೀ ರಾತ್ರಿ ಸದನದಲ್ಲಿ ಧರಣಿ ನಡೆಸಿದರು.

ಕಳೆದ ರಾತ್ರಿ ಮೂವರು ಸಚಿವರು ಹಿರಿಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಅದು ಅಪೂರ್ಣವಾಗಿರುವುದರಿಂದ ಧರಣಿ ಮುಂದುವರಿಯಲಿದೆ ಎಂದು ವಿರೋಧ ಪಕ್ಷಗಳ ನಾಯಕ ಟೀಕಾರಾಮ್ ಜುಲ್ಲಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜುಲ್ಲಿ, “ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ನಾವು ಆಗ್ರಹಿಸುತ್ತೇವೆ. ಇಂತಹ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಿರುವ ಪೂರ್ವ ನಿದರ್ಶನಗಳಿದ್ದರೂ, ಸರಕಾರಕ್ಕೇ ಸದನ ನಡೆಯುವುದು ಬೇಡವಾಗಿದೆ. ಹೀಗಾಗಿ, ಅವರು ಇಂತಹ ವಿಷಯಗಳನ್ನು ಸೃಷ್ಟಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಸ್ಪೀಕರ್ ಆರು ಶಾಸಕರನ್ನು ಅಮಾನತುಗೊಳಿಸಿ, ಶುಕ್ರವಾರ ಸದನವನ್ನು ಮುಂದೂಡಿದ್ದರಿಂದ, ಸದನದಲ್ಲಿ ಕಾಂಗ್ರೆಸ್ ಶಾಸಕರು ಧರಣಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್, “2023-24ರ ಬಜೆಟ್ ನಲ್ಲೂ ಕೂಡಾ ನೀವು ಎಂದಿನಂತೆ ನಿಮ್ಮ ಅಜ್ಜಿ(ಇಂದಿರಾ ಗಾಂಧಿ)ಯ ಹೆಸರನ್ನು ದುಡಿಯುವ ಮಹಿಳೆಯರ ವಸತಿ ನಿಲಯ ಯೋಜನೆಗೆ ಇರಿಸಿದ್ದೀರಿ” ಎಂದು ಛೇಡಿಸಿದ್ದರು. ಇದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿ, ಸದನವನ್ನು ಮೂರು ಬಾರಿ ಮುಂದೂಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News