ಮಧ್ಯಪ್ರದೇಶ | 500 ಕೋಟಿ ರೂ. ವೆಚ್ಚದ ರೇವಾ ವಿಮಾನ ನಿಲ್ದಾಣದ ಆವರಣಗೋಡೆ ಮಳೆಯಿಂದ ಕುಸಿತ!
PC | ndtv
ರೇವಾ, ಮಧ್ಯಪ್ರದೇಶ : ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ರೇವಾ ವಿಮಾನ ನಿಲ್ದಾಣದ ಆವರಣಗೋಡೆ, ನಿರ್ಮಾಣವಾದ ಒಂದೇ ತಿಂಗಳಲ್ಲಿ ಮಳೆಯಿಂದಾಗಿ ಭಾಗಶಃ ಕುಸಿದಿದೆ. ಇದು ರಾಜ್ಯದ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆಯ ಕಾಮಗಾರಿಯ ಗುಣಮಟ್ಟ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸುವ ಸಿದ್ಧತೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸ್ಥಳೀಯರ ಪ್ರಕಾರ, ಗೋಡೆಯ ತಳಭಾಗದಲ್ಲಿ ಬಿರುಕು ಇದ್ದು, ಇದು ಭಾರಿ ಮಳೆಯ ಸಂದರ್ಭದಲ್ಲಿ ರಾತ್ರಿ ವೇಳೆ ಆವರಣ ಗೋಡೆಯ ಒಂದು ಭಾಗ ಕುಸಿಯಲು ಕಾರಣವಾಗಿದೆ. ಆವರಣಗೋಡೆ ವಿಫಲವಾಗಿರುವುದು ಇದೇ ಮೊದಲಲ್ಲ; ಕಳೆದ ಮಳೆಗಾಲದಲ್ಲಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭವಾಗುವ ಮುನ್ನವೇ ಇಂಥ ಬಿರುಕು ಇದ್ದುದನ್ನು ವರದಿ ಮಾಡಲಾಗಿತ್ತು.
ರೇವಾ ವಿಮಾನ ನಿಲ್ದಾಣ ವಿದರ್ಭ ಪ್ರದೇಶದ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ಭಾವಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ವರ್ಚುವಲ್ ವಿಧಾನದ ಮೂಲಕ ವಾರಾಣಾಸಿಯಿಂದ ಉದ್ಘಾಟಿಸಿದ್ದರು. ಐದು ಗ್ರಾಮಗಳ 323 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಕೇವಲ 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ಈ ವ್ಯವಸ್ಥೆಯಡಿ 2300 ಮೀಟರ್ ಉದ್ದದ ರನ್‍ವೇ ಅಭಿವೃದ್ಧಿಪಡಿಸಲಾಗಿದ್ದು, ರೇವಾದಿಂದ ಖಜುರಾಹೊ ಮತ್ತು ಜಬಲ್ಪುರ ಮಾರ್ಗವಾಗಿ ಭೋಪಾಲ್‍ಗೆ ತೆರಳುವ ಎರಡು ವಿಮಾಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಕೇವಲ 19 ಆಸನಗಳ ವಿಮಾನ ಮಾತ್ರ ಕಾರ್ಯಾಚರಿಸುತ್ತಿದ್ದು, ಮುಂದಿನ ತಿಂಗಳುಗಳಲ್ಲಿ 72 ಆಸನಗಳ ವಿಮಾನ ಆರಂಭಿಸುವ ಯೋಜನೆ ಇದೆ. ಡಿಜಿಸಿಎ ಇದನ್ನು ಅನುಮೋದಿಸಿದ್ದು, ಮುಂದಿನ 50 ವರ್ಷಗಳ ಅವಧಿಗೆ ಈ ಭಾಗಕ್ಕೆ ಸೇವೆ ಒದಗಿಸುವ ಯೋಜನೆಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.