ಸೆ.24 ರಂದು ಪಾಟ್ನಾದಲ್ಲಿ ಸಿಡಬ್ಲ್ಯುಸಿ ಸಭೆ: ರಾಹುಲ್, ಖರ್ಗೆ ಭಾಗಿ
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ | PTI
ಪಾಟ್ನಾ(ಬಿಹಾರ),ಸೆ.22: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ(ಸಿಡಬ್ಲ್ಯುಸಿ) ಸಭೆಯು ಸೆ.24ರಂದು ಪಾಟ್ನಾದಲ್ಲಿ ನಡೆಯಲಿದ್ದು,ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದಾರೆ ಎಂದು ಎಐಸಿಸಿ ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಬಿಹಾರದಲ್ಲಿ ‘ಎರಡನೇ ಸ್ವಾತಂತ್ಯ ಸಂಗ್ರಾಮ’ದಲ್ಲಿ ಹೋರಾಡುತ್ತಿದೆ. ಇದೇ ಕಾರಣದಿಂದ ಸಿಡಬ್ಲ್ಯುಸಿ ಸಭೆಯನ್ನು ಇಲ್ಲಿ ಆಯೋಜಿಸಲಾಗಿದೆ. ಇತರ ಎಲ್ಲ ಸಿಡಬ್ಲ್ಯುಸಿ ಸದಸ್ಯರನ್ನೂ ಆಹ್ವಾನಿಸಲಾಗಿದ್ದು, ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯು ‘ಮತಗಳ್ಳತನ’ ನಡೆಸುತ್ತಿದೆ ಮತ್ತು ಪ್ರಧಾನಿ ಮೋದಿ ‘ಕಷ್ಟಪಟ್ಟು ಓದದ, ಆದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಅಕ್ರಮ ಮಾರ್ಗಗಳನ್ನು ಆಶ್ರಯಿಸುವ ವಿದ್ಯಾರ್ಥಿಯಿದ್ದಂತೆ ಎಂದು ಅಲ್ಲಾವರು ಆರೋಪಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇಂಡಿಯಾ ಮೈತ್ರಿಕೂಟದಲ್ಲಿ ಸ್ಥಾನ ಹಂಚಿಕೆ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯುತ್ತಿವೆ ಮತ್ತು ನಾವೂ ಶೀಘ್ರವೇ ಕಾರ್ಯಸಾಧ್ಯ ಸೂತ್ರವನ್ನು ರೂಪಿಸಲಿದ್ದೇವೆ. ಇದೇ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಗೊಂದಲದ ಗೂಡಾಗಿರುವುದನ್ನು ನಾವು ನೋಡುತ್ತಿದ್ದೇವೆ’ ಎಂದರು.
ಬಿಹಾರದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.