ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ದಿಲ್ಲಿ ಹೈಕೋರ್ಟ್ ಅನುಮತಿ
PC : PTI
ಹೊಸದಿಲ್ಲಿ: ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ತನ್ನ 26 ವಾರಗಳ ಗರ್ಭವನ್ನು ತೆಗೆದು ಹಾಕಲು ಸೋಮವಾರ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿದೆ.
ಸಂತ್ರಸ್ತ ಬಾಲಕಿಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾ. ಮನೋಜ್ ಜೈನ್, ಆಕೆಯ 26 ವಾರಗಳ ಗರ್ಭವನ್ನು ತೆಗೆದು ಹಾಕಲು ಏಮ್ಸ್ ವೈದ್ಯಕೀಯ ಅಧೀಕ್ಷಕರಿಗೆ ನಿರ್ದೇಶನ ನೀಡಿದರು.
ತೀವ್ರ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿರುವುದರಿಂದ, ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಜುಲೈ 1ರಂದು ಸಂತ್ರಸ್ತ ಬಾಲಕಿಗೆ ಗರ್ಭಪಾತ ನಡೆಸಬೇಕು ಎಂದು ಏಮ್ಸ್ ಹಾಗೂ ಅದರ ವೈದ್ಯರ ತಂಡಕ್ಕೆ ಸೂಚನೆ ನೀಡಿತು.
ಆದರೆ, ಇದಕ್ಕೂ ಮುನ್ನ, ಬಾಲಕಿಯ ಗರ್ಭಾವಸ್ಥೆಯ ಅವಧಿ ತೀರಾ ಹೆಚ್ಚಾಗಿರುವುದರಿಂದ, ಆಕೆಗೆ ಸಿಸೇರಿಯನ್ ವಿಧಾನದ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಪಾತ ನೆರವೇರಿಸಬೇಕಿದೆ. ಇದರಿಂದಾಗಿ, ಆಕೆಯ ಭವಿಷ್ಯದ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮವುಂಟಾಗುವ ಸಾಧ್ಯತೆ ಇದೆ ಎಂಬ ಕಾರಣ ಮುಂದು ಮಾಡಿ, ಸಂತ್ರಸ್ತ ಬಾಲಕಿಗೆ ಗರ್ಭಪಾತ ನೆರವೇರಿಸಲು ವೈದ್ಯಕೀಯ ಮಂಡಳಿ ನಿರಾಕರಿಸಿತ್ತು. ಇದನ್ನು ಹೊರತುಪಡಿಸಿದರೆ, ಮಗುವಿನ ಜನ್ಮ ನೀಡಲು ಬಾಲಕಿ ಸಮರ್ಥವಾಗಿದ್ದಾಳೆ ಎಂದು ವೈದ್ಯಕೀಯ ಮಂಡಳಿ ಅಭಿಪ್ರಾಯ ಪಟ್ಟಿತ್ತು.
ಆದರೆ, ತನ್ನ ಗರ್ಭದೊಂದಿಗೆ ಮುಂದುವರಿಯಲು ನಿರಾಕರಿಸಿದ್ದ ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.