ದಾಬರ್ ಬಗ್ಗೆ ಅವಹೇಳನಕಾರಿ ಜಾಹೀರಾತು : ಪತಂಜಲಿಗೆ ದಂಡದ ಎಚ್ಚರಿಕೆ ನೀಡಿದ ದಿಲ್ಲಿ ಹೈಕೋರ್ಟ್
ರಾಮ್‌ದೇವ್ | PC : PTI
ಹೊಸದಿಲ್ಲಿ,ಸೆ.19: ದಾಬರ್ ಉತ್ಪನ್ನದ ಕುರಿತು ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಏಕ ನ್ಯಾಯಾಧೀಶರ ಪೀಠವು ಜುಲೈನಲ್ಲಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದಕ್ಕಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಯೋಗಗುರು ರಾಮದೇವ ಅವರ ಪತಂಜಲಿ ಆಯುರ್ವೇದವನ್ನು ತೀವ್ರ ತರಾಟೆಗೆತ್ತಿಕೊಂಡಿದೆ.
ಅರ್ಜಿಯನ್ನು ಹಿಂದೆಗೆದುಕೊಳ್ಳುವಂತೆ ಅಥವಾ ದಂಡವನ್ನು ಎದುರಿಸುವಂತೆ ಪತಂಜಲಿಗೆ ಸೂಚಿಸಿದ ನ್ಯಾಯಮೂರ್ತಿಗಳಾದ ಹರಿಶಂಕರ ಮತ್ತು ಓಂ ಪ್ರಕಾಶ ಶುಕ್ಲಾ ಅವರ ಪೀಠವು, ಜು.3ರ ಆದೇಶವು ಸಂಪೂರ್ಣ ಜಾಹೀರಾತನ್ನು ಹಿಂದೆಗೆದುಕೊಳ್ಳುವಂತೆ ಪತಂಜಲಿಗೆ ಸೂಚಿಸಿರಲಿಲ್ಲ, ಅದರ ಕೆಲವು ಭಾಗಗಳನ್ನು ಪರಿಷ್ಕರಿಸುವಂತೆ ನಿರ್ದೇಶಿಸಿತ್ತು ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು.
ಪತಂಜಲಿ ಪರ ವಕೀಲ ಜಯಂತ ಮೆಹ್ತಾ ಅವರು ಮುಂದಿನ ಕ್ರಮದ ಬಗ್ಗೆ ತನ್ನ ಕಕ್ಷಿದಾರರಿಂದ ಸೂಚನೆಗಳನ್ನು ಪಡೆದುಕೊಳ್ಳಲು ಕಾಲಾವಕಾಶ ಕೋರಿದ ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.
ಚ್ಯವನಪ್ರಾಶ ತಯಾರಿಸುವ ಜ್ಞಾನ ಇತರ ಯಾವುದೇ ತಯಾರಕರಿಗಿಲ್ಲ ಎಂದು ಹೇಳುವ ಮೂಲಕ ಪತಂಜಲಿ ಆಯುರ್ವೇದ ತನ್ನ ಚ್ಯವನಪ್ರಾಶ ಉತ್ಪನ್ನದ ಅವಹೇಳನ ಮಾಡುತ್ತಿದೆ ಎಂದು ಆರೋಪಿಸಿ ಡಾಬರ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ಮಿನಿ ಪುಷ್ಕರ್ಣ ಅವರು ಜು.3ರಂದು ಮಧ್ಯಂತರ ಆದೇಶವನ್ನು ಹೊರಡಿಸಿದ್ದರು.
ರಾಮದೇವ ಅವರನ್ನು ಒಳಗೊಂಡಿದ್ದ ಟಿವಿ ಜಾಹೀರಾತನ್ನು ಪತಂಜಲಿ ಪ್ರಸಾರಿಸಿದ ಬಳಿಕ ವಿವಾದ ಆರಂಭಗೊಂಡಿತ್ತು. ಜಾಹೀರಾತಿನಲ್ಲಿ ರಾಮದೇವ ಇತರ ಕಂಪನಿಗಳು ಮಾರಾಟ ಮಾಡುತ್ತಿರುವ ಚ್ಯವನಪ್ರಾಶ ಉತ್ಪನ್ನದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು.