ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ: ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ ದೇವ್
ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ ದೇವ್ (PTI)
ಹೊಸ ದಿಲ್ಲಿ: ದಿಲ್ಲಿ ವಿಧಾನಸಭೆಗೆ ಬುಧವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, “ದಿಲ್ಲಿಯು ಬಿಜೆಪಿ ಮುಖ್ಯಮಂತ್ರಿಯನ್ನು ಹೊಂದಲಿದೆ. ಆದರೆ, ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಕೇಂದ್ರ ನಾಯಕತ್ವ ನಿರ್ಧರಿಸಲಿದೆ” ಎಂದು ಶನಿವಾರ ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ ದೇವ್ ಹೇಳಿದರು.
ಕನ್ಹಾಟ್ ಪ್ಲೇಸ್ ನಲ್ಲಿರುವ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿರೇಂದ್ರ ಸಚ್ ದೇವ್, “ಇಲ್ಲಿಯವರೆಗಿನ ಫಲಿತಾಂಶಗಳು ನಮ್ಮ ನಿರೀಕ್ಷೆಯಂತೆಯೇ ಇವೆ. ಹೀಗಿದ್ದೂ, ನಾವು ಅಂತಿಮ ಫಲಿತಾಂಶದವರೆಗೂ ಕಾಯುತ್ತೇವೆ” ಎಂದು ತಿಳಿಸಿದರು.
ಬಿಜೆಪಿಯ ಅಭ್ಯರ್ಥಿಗಳು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿದರು ಹಾಗೂ ದಿಲ್ಲಿಯ ಮತದಾರರು ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಆಯ್ಕೆ ಮಾಡಿಕೊಂಡರು. ದಿಲ್ಲಿಯ ಜನತೆಗೆ ಅಭಿವೃದ್ಧಿಯ ಮಾದರಿ ಬೇಕಿದ್ದುದರಿಂದ, ಅವರು ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ದಿಲ್ಲಿಯಲ್ಲಿ ಬಿಜೆಪಿ ಡಬಲ್ ಇಂಜಿನ್ ಸರಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, “ಈ ಫಲಿತಾಂಶವು ಪ್ರಧಾನಿ ಮೋದಿಯ ದೂರದೃಷ್ಟಿಯ ಫಲ ಎಂದು ಹೇಳಲು ನಮಗೆ ಯಾವುದೇ ಮುಜುಗರವಿಲ್ಲ. ದಿಲ್ಲಿಯು ಸುಭದ್ರ ಹಾಗೂ ಸ್ಥಿರ ಸರಕಾರ ಪಡೆಯುವುದನ್ನು ನಾವು ಖಾತರಿಪಡಿಸುತ್ತೇವೆ” ಎಂದು ಭರವಸೆ ನೀಡಿದರು.
ಚುನಾವಣಾ ಆಯೋಗದ ಅಂತರ್ಜಾಲದಲ್ಲಿನ ಇತ್ತೀಚಿನ ಟ್ರೆಂಡ್ ಪ್ರಕಾರ, ಬಿಜೆಪಿ 38 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಆಪ್ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.