×
Ad

ಈಶ ಫೌಂಡೇಶನ್‌ ನಲ್ಲಿ ಅಪ್ರಾಪ್ತರ ಮೇಲೆ ದೌರ್ಜನ್ಯ?; ʼಸದ್ಗುರುʼ ಆಪ್ತರ ಇಮೇಲ್‌ ನಲ್ಲಿ ಹೇಳಿದ್ದೇನು ?

Update: 2025-02-27 18:18 IST

ಜಗ್ಗಿ ವಾಸುದೇವ್

ಜಗ್ಗಿ ವಾಸುದೇವ್ ಆಶ್ರಮದಲ್ಲಿ ಏನೇನೆಲ್ಲ ನಡೆಯುತ್ತಿವೆ ಎಂಬುದರ ಬಗ್ಗೆ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಅವರ ಸ್ಪೋಟಕ ವೀಡಿಯೊ ಬಳಿಕ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಪಿಯೂಷ್ ಮಾನುಷ್ ಪೊಲೀಸ್ ದೂರು ದಾಖಲಿಸಿದ್ದಾರೆ.

ಕೊಯಮತ್ತೂರಿನ ಪೆರೂರ್‌ನ ಎಡಬ್ಲ್ಯೂಪಿಎಸ್‌ನಲ್ಲಿ ಅವರು ಎಫ್‌ಐಆರ್ ದಾಖಲಿಸಿರುವ ಬಗ್ಗೆ ಶ್ಯಾಮ್ ಮೀರಾ ಸಿಂಗ್ ಅವರೇ ಟ್ವೀಟ್ ಮೂಲಕ ಹೇಳಿದ್ದಾರೆ.

ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಪಿಯೂಷ್ ಮಾನುಷ್ ಅವರು " ಜಗ್ಗಿ, ಬಹಳ ಬೇಗ ನೀನು ಕಂಬಿ ಹಿಂದೆ ಹೋಗುವೆ. ಯಾವ ಅಮಿತ್ ಷಾ ಅಥವಾ ಮೋದಿ ನಿನ್ನನ್ನು ರಕ್ಷಿಸಲು ಸಾಧ್ಯವಿಲ್ಲ " ಎಂದು ಹೇಳಿದ್ದಾರೆ

ಪಿಯೂಷ್ ಮಾನುಷ್ ಈ ಹಿಂದೆಯೂ ಜಗ್ಗಿ ವಾಸುದೇವ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಅದಕ್ಕಾಗಿ ಕೋರ್ಟು ಕಚೇರಿ ಸುತ್ತಿದವರು. ಈ ಬಾರಿ ಮತ್ತೊಂದು ದೂರು ದಾಖಲಿಸಿದ್ದಾರೆ.

ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್‌ ಜೊತೆ ಕೆಲಸ ಮಾಡಿದವರಾದ ಮತ್ತು ಅವರಿಗೆ ಹತ್ತಿರದವರಾದ ಭಾರತಿ ವರದರಾಜ್ ಮತ್ತು ಪ್ರದ್ಯುತ ಅವರ ಅಧಿಕೃತ ಇಮೇಲ್‌ಗಳ ಆಧಾರದಲ್ಲಿ ಶ್ಯಾಮ್ ಮೀರಾ ಸಿಂಗ್ ಈ ವೀಡಿಯೊ ಮಾಡಿದ್ದರು.

ಈಶ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರ ವಿಚಾರದಲ್ಲಿ ಅಪರಾಧಗಳು ನಡೆದಿವೆ ಎಂಬುದು ಅವರಿಬ್ಬರ ನಡುವೆ ವಿನಿಮಯಗೊಂಡಿದ್ದ ಇಮೇಲ್ ಗಳ ಮೂಲಕ ಬಯಲಾಗಿತ್ತು.

ಆ ವೀಡಿಯೊದಲ್ಲಿನ ಪ್ರಮುಖ ವಿಷಯಗಳನ್ನು ಸಂಕ್ಷಿಪ್ತವಾಗಿ ಅವರೇ ಟ್ವೀಟ್ ಒಂದರಲ್ಲಿ ಬರೆದಿದ್ದಾರೆ.

1. ಈಶ ಶಾಲೆಯ ಪಿಟಿ ಟೀಚರ್ 8 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದರು. ಜಗ್ಗಿ ವಾಸುದೇವ್ ಅವರಿಗೆ ಆಕೆ ಈ ಬಗ್ಗೆ ತಿಳಿಸಿದ್ದರೂ, ಅವರು ಏನೂ ಮಾಡಲಿಲ್ಲ. ಕೊಯಮತ್ತೂರು ಪೊಲೀಸರಿಗೆ ಆನ್‌ಲೈನ್ ದೂರು (ಎನ್‌ಆರ್‌ಐ ಪೋರ್ಟಲ್) ನೀಡಿದ್ದರೂ ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಆರೋಪಿ ಪಿಟಿ ಟೀಚರ್ ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

2. ದಿಲ್ಲಿಯ ಹುಡುಗಿಯೊಬ್ಬಳು ಈಶ ಫೌಂಡೇಷನ್ ನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದರು. ಸಾಕೇತ್‌ ನಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದರು. ಆದರೆ ಆರೋಪಿಯ ವಿರುದ್ಧ ಕ್ರಮ ಜರುಗಲಿಲ್ಲ. ಕಡೆಗೆ ಆಕೆ ಪ್ರಕರಣ ಹಿಂತೆಗೆದುಕೊಂಡರು. ಜಗ್ಗಿ ವಾಸುದೇವ್ ಸ್ವಂತ ಆಶ್ರಮದಲ್ಲಿ ಅತ್ಯಾಚಾರ ನಡೆದಾಗಲೂ ಈ ಪ್ರಕರಣದಲ್ಲಿ ಏನನ್ನೂ ಮಾಡಲಿಲ್ಲ.

3. ಈಶ ಸಂಸ್ಥೆಯ ಮೇಲ್ವರ್ಗದ ವಿದ್ಯಾರ್ಥಿಯೊಬ್ಬ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಜಗ್ಗಿ ವಾಸುದೇವ್ ಆರೋಪಿಯನ್ನು ರಕ್ಷಿಸಿದರು ಮತ್ತು ಈಶ ಶಾಲೆಯಲ್ಲಿ ಆತ ಓದು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಆರೋಪಿ ಈಗ ಮುಕ್ತನಾಗಿದ್ದಾನೆ.

4. ಈಶ ಫೌಂಡೇಶನ್‌ನಿಂದ ಸೋರಿಕೆಯಾದ ಅಧಿಕೃತ ಇಮೇಲ್‌ಗಳು ಅಪ್ರಾಪ್ತ ಬಾಲಕಿಯರನ್ನು ದೀಕ್ಷೆಗಾಗಿ ಮೈ ಮೇಲಿನ ಉಡುಪು ತೆಗೆದಿಟ್ಟು ಬರುವಂತೆ ಹೇಳಲಾಗುತ್ತದೆ ಎಂಬುದನ್ನು ಬಯಲು ಮಾಡಿವೆ. ಅದರ ಬಗ್ಗೆಯೂ ಜಗ್ಗಿ ವಾಸುದೇವ್ ಏನೂ ಮಾಡಲಿಲ್ಲ.

ವೀಡಿಯೊ ಅಪ್ಲೋಡ್ ಮಾಡಿದ ಬಳಿಕ ಶ್ಯಾಮ್ ಮೀರಾ ಸಿಂಗ್ ಅವರೇ ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ಅವರ ಆಶ್ರಮದಲ್ಲಿ ಸಾಮೂಹಿಕ ಲೈಂಗಿಕ ಕಿರುಕುಳ ಅಪರಾಧ ನಡೆದಿರುವುದು ಈಶ ಫೌಂಡೇಶನ್‌ನ ಅಧಿಕೃತ ಇಮೇಲ್‌ಗಳಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ದಯವಿಟ್ಟು ಈ ವಿಷಯದ ಬಗ್ಗೆ ತನಿಖೆ ನಡೆಸಲು ತಮಿಳುನಾಡು ಪೊಲೀಸರಿಗೆ ತಿಳಿಸಿ ಎಂದು ವಿನಂತಿಸಿದ್ದರು.

ಅಲ್ಲದೆ, ಸಾಕ್ಷಿಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಲು ನಾನು ನೆರವು ನೀಡಲು ಸಿದ್ಧನಿದ್ದೇನೆ ಎಂದು ಕೂಡ ಶ್ಯಾಮ್ ಮೀರಾ ಸಿಂಗ್ ಅದರಲ್ಲಿ ಬರೆದಿದ್ದರು.

ಈಗ ಪಿಯೂಷ್ ಮಾನುಷ್ ಅವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಈಶ ಫೌಂಡೇಶನ್ ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲಾಗಿರುವ ಅಪರಾಧಗಳ ಬಗ್ಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿದೆ. ಕೆಲವರು ಜಗ್ಗಿ ವಾಸುದೇವ್ ಮತ್ತು ಅವರ ಸಂಸ್ತೆಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಬೇಕೆಂದು ಸೂಚಿಸುತ್ತಿದ್ದಾರೆ.

ಶ್ಯಾಮ್ ಮೀರಾ ಸಿಂಗ್ ವೀಡಿಯೊಗೆ ಯೂಟ್ಯೂಬರ್ ಧ್ರುವ್ ರಾಠಿ ಕೂಡ ಪ್ರತಿಕ್ರಿಯಿಸಿದ್ದಾರೆ. ತನಿಖೆ ನಡೆಸುವಂತೆ ಅವರು ತಮಿಳುನಾಡು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಪತ್ರಕರ್ತರಾದ ತನುಶ್ರೀ ಪಾಂಡೆ, ವಿನೋದ್ ಕಾಪ್ರಿ ಮೊದಲಾದವರು ಟ್ವೀಟ್ ಮಾಡಿ ಇದು ಬಹಳ ಗಂಭೀರ ಹಾಗು ಆಘಾತಕಾರಿ ಆರೋಪ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಯುವತಿಯರು ಹಾಗು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಹಲ್ಲೆ ಹಾಗು ಶೋಷಣೆ ಈ ಆಶ್ರಮಗಳ ಹೆಸರಿನ ಸಂಸ್ಥೆಗಳ ಸಾಮಾನ್ಯ ಧ್ಯೇಯವಾಗಿರುವಂತಿದೆ. ಇದರ ಬಗ್ಗೆ ಜಗ್ಗಿ ವಿರುದ್ಧ ತನಿಖೆ ಆಗದಿದ್ದರೆ ಇನ್ಯಾವುದರ ಬಗ್ಗೆ ತನಿಖೆ ಮಾಡೋದು ಎಂದು ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಡೆದ ಅನ್ಯಾಯವನ್ನು ಬಯಲಿಗೆಳೆದ ಪತ್ರಕರ್ತೆ ತನುಶ್ರೀ ಪಾಂಡೆ ಕೇಳಿದ್ದಾರೆ.

ಆದರೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಕಡೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸ್ಟಾಲಿನ್ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News