ಏರ್ ಇಂಡಿಯಾ ವಿಮಾನ ಅಪಘಾತ | ಒಂಭತ್ತು ಮಂದಿ ಮೃತರ ಡಿಎನ್ಎ ಹೋಲಿಕೆ: ಮೊದಲ ಮೃತ ದೇಹ ಕುಟುಂಬದ ಸದಸ್ಯರಿಗೆ ಹಸ್ತಾಂತರ
PC : PTI
ಅಹಮದಾಬಾದ್: ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಒಂಭತ್ತು ಮಂದಿಯ ಡಿಎನ್ಎ ವಿಶ್ಲೇಷಣೆ ಸಂಪೂರ್ಣಗೊಂಡಿದ್ದು, ಈ ಪೈಕಿ ಓರ್ವ ಮೃತ ದೇಹವನ್ನು ಆಸ್ಪತ್ರೆಯ ಅಧಿಕಾರಿಗಳು ಅಹಮದಾಬ್ ನ ಕುಟುಂಬವೊಂದರ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಶಿಷ್ಟಾಚಾರದ ಪ್ರಕಾರ, ಡಿ ಎನ್ ಎ ಪರಿಶೀಲನೆ ಹಾಗೂ ದಾಖಲೀಕರಣ ಪ್ರಕ್ರಿಯೆ ಮುಕ್ತಾಯಗೊಂಡ ನಂತರವಷ್ಟೆ ಮೃತ ದೇಹಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಇದಕ್ಕೂ ಮುನ್ನ, ಎಂಟು ಮೃತ ವ್ಯಕ್ತಿಗಳನ್ನು ಅವರ ಕುಟುಂಬದ ಸದಸ್ಯರು ಗುರುತಿಸಿದ್ದರಿಂದ ಹಾಗೂ ಅವರ ದೇಹಗಳು ಹಾನಿಗೊಳಗಾಗದೆ ಇದ್ದುದರಿಂದ, ಅವುಗಳನ್ನು ಆಸ್ಪತ್ರೆಯ ಅಧಿಕಾರಿಗಳು ಸಂಬಂಧಿತ ಕುಟುಂಬಗಳ ಸದಸ್ಯರಿಗೆ ಹಸ್ತಾಂತರಿಸಿದ್ದರು.
ವೈದ್ಯರ ಪ್ರಕಾರ, ಇಲ್ಲಿಯವರೆಗೆ ವಿಮಾನ ಅಪಘಾತ ಸಂಭವಿಸಿದ ಸ್ಥಳದಿಂದ ಆಸ್ಪತ್ರೆಗೆ ಸುಮಾರು 270 ಮೃತ ದೇಹಗಳನ್ನು ತರಲಾಗಿದೆ ಎಂದು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕಾಫ್ ಆಗುತ್ತಿದ್ದಂತೆಯೇ ಪೈಲಟ್ ಮೇ ಡೇ ಕಾಲ್ ನೀಡಿದ ಬಳಿಕ, ವಸತಿ ಪ್ರದೇಶವೊಂದರ ಮೇಲೆ ಬೆಂಕಿಯ ಯ ಉಂಡೆಗಳಾಗಿ ಸ್ಫೋಟಗೊಂಡು ಪತನವಾಗಿತ್ತು. ಈ ಅಪಘಾತವನ್ನು ದೇಶ ಇದುವರೆಗೆ ಕಂಡ ಅತ್ಯಂತ ಭೀಕರ ವಿಮಾನ ಅಪಘಾತ ಎಂದು ಬಣ್ಣಿಸಲಾಗಿದೆ.
ವಿಮಾನ ಅಪಘಾತಕ್ಕೀಡಾಗುವುದಕ್ಕೂ ಮುನ್ನ, ವಿಮಾನದ ಸಿಬ್ಬಂದಿಗಳೂ ಸೇರಿದಂತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಪ್ರಯಾಣಿಕರ ಪೈಕಿ ಕೇವಲ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾರೆ.