ಮಣಿಪುರದಲ್ಲಿ ನಾಟಕೀಯ ಬೆಳವಣಿಗೆ | ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲವನ್ನು ಹಿಂಪಡೆದ ಜೆಡಿಯು ರಾಜ್ಯಾಧ್ಯಕ್ಷರ ವಜಾ
ನಿತೀಶ್ ಕುಮಾರ್, ಎನ್.ಬೀರೇನ್ ಸಿಂಗ್ | PTI
ಇಂಫಾಲ: ಮಣಿಪುರದ ಎನ್.ಬೀರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿದ್ದಕ್ಕಾಗಿ ನಿತೀಶ ಕುಮಾರ ನೇತೃತ್ವದ ಜೆಡಿಯು ತನ್ನ ರಾಜ್ಯ ಘಟಕದ ಅಧ್ಯಕ್ಷ ಕ್ಷೇತ್ರಿಮಯೂಮ ಬೀರೇನ್ ಸಿಂಗ್ ಅವರನ್ನು ಬುಧವಾರ ಹುದ್ದೆಯಿಂದ ವಜಾಗೊಳಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಫಾಕ್ ಅಹ್ಮದ್ ತಿಳಿಸಿದ್ದಾರೆ.
ಮಣಿಪುರ ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಳ್ಳುವಲ್ಲಿ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಮಾಲೋಚಿಸದಿದ್ದಕ್ಕಾಗಿ ಮತ್ತು ಸ್ವಂತ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮಣಿಪುರ ಘಟಕದ ಅಧ್ಯಕ್ಷರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಜೆಡಿಯು ವಕ್ತಾರ ರಾಜೀವ ರಂಜನ ಪ್ರಸಾದ ಅವರೂ ದೃಢಪಡಿಸಿದರು.
ಬೆಂಬಲ ಹಿಂದೆಗೆತದ ವರದಿಗಳನ್ನು ಆಧಾರರಹಿತ ಎಂದು ಬಣ್ಣಿಸಿರುವ ಜೆಡಿಯು ಕೇಂದ್ರದಲ್ಲಿ ಮತ್ತು ಮಣಿಪುರದಲ್ಲಿ ಬಿಜೆಪಿಯೊಂದಿಗೆ ಮೈತ್ರಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಂಡಿರುವುದಾಗಿ ಮಣಿಪುರ ಜೆಡಿಯು ಘಟಕವು ಬುಧವಾರ ಮುಖ್ಯಮಂತ್ರಿ ಎನ್ .ಬೀರೇನ್ ಸಿಂಗ್ ಅವರಿಗೆ ಅಧಿಕೃವಾಗಿ ಪತ್ರವನ್ನು ಬರೆದಿತ್ತು. ಸದನದಲ್ಲಿಯ ಏಕೈಕ ಜೆಡಿಯು ಶಾಸಕ ಮುಹಮ್ಮದ್ ಅಬ್ದುಲ್ ನಾಸಿರ್ ಅವರನ್ನು ಪ್ರತಿಪಕ್ಷ ಶಾಸಕರನ್ನಾಗಿ ಪರಿಗಣಿಸುವಂತೆ ಅದು ಸೂಚಿಸಿತ್ತು.
2022ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಆರು ಜೆಡಿಯು ಶಾಸಕರು ಗೆದ್ದಿದ್ದರಾದರೂ ನಂತರ ಐವರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಹೀಗಾಗಿ ನಾಸಿರ್ ಅವರು ರಾಜ್ಯ ವಿಧಾನಸಭೆಯಲ್ಲಿ ಏಕೈಕ ಜೆಡಿಯು ಶಾಸಕರಾಗಿ ಉಳಿದುಕೊಂಡಿದ್ದರು.