ತೇಜಸ್ವಿ ಯಾದವ್ ಬಳಿ ಎರಡನೇ ಚುನಾವಣಾ ಗುರುತು ಚೀಟಿ?: ತನಿಖೆಗೆ ಚುನಾವಣಾ ಆಯೋಗ ಆದೇಶ
ತೇಜಸ್ವಿ ಯಾದವ್ | PC : PTI
ಪಾಟ್ನಾ,ಆ.3: ಬಿಹಾರ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ಹೆಸರಿನಲ್ಲಿ ಎರಡನೇ ಮತದಾನದ ಗುರುತು ಚೀಟಿಯನ್ನು ಹೊಂದಿದ್ದರೆಂದು ವರದಿಯಾಗಿದ್ದು, ಅವರೀಗ ವಿವಾದದ ಸುಳಿಗೆ ಸಿಲುಕಿದ್ದಾರೆ.
ತೇಜಸ್ವಿ ಯಾದವ್ ರಿಗೆ ನೀಡಲಾದ ಎರಡನೆ ಗುರುತುಚೀಟಿಯು ನಕಲಿ ಎಂದು ದೃಢಪಡಿಸಲು ತನಿಖೆ ನಡೆಸುವಂತೆ ಚುನಾವಣಾ ಆಯೋಗವು ಆದೇಶಿಸಿದೆ. ಅವರ ಬಳಿಯಿರುವ ಚುನಾವಣಾ ಗುರುತುಚೀಟಿ (ಎಪಿಕ್)ಯನ್ನು ತನಗೆ ಹಸ್ತಾಂತರಿಸುವಂತೆಯೂ ಸೂಚಿಸಿದೆ. ಎರಡನೇ ಮತದಾರ ಗುರುತು ಚೀಟಿಯನ್ನು ಅವರಿಗೆ ಅಧಿಕೃತ ಸಂಸ್ಥೆ ಅಥವಾ ವ್ಯಕ್ತಿಗಳ ಮೂಲಕ ನೀಡಲಾಗಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ತೇಜಸ್ವಿ ಯಾದವ್ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚುನಾವಣಾ ಆಯೋಗದ ವೆಬ್ಸೈಟ್ ನಲ್ಲಿ ತನ್ನ ಮತದಾರ ಚೀಟಿ ಸಂಖ್ಯೆ RAB2916120ರ ವಿವರಗಳನ್ನು ಹುಡುಕಿದಾಗ ಅದು ಕಾಣಸಿಗಲಿಲ್ಲ. ಚುನಾವಣಾ ಪಟ್ಟಿಯಲ್ಲಿ ನನ್ನ ಹೆಸರಿಲ್ಲದೆ ಇದ್ದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದರು.
ಆದರೆ ತನ್ನ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ತೇಜಸ್ವಿ ಯಾದವ್ ಅವರ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು. ಮತದಾರರಪಟ್ಟಿಯಲ್ಲಿ ತೇಜಸ್ವಿ ಅವರ ಹೆಸರಿರುವ ಬಗ್ಗೆ ಪುರಾವೆಯನ್ನು ನೀಡಿತ್ತು. ಈ ಬಗ್ಗೆ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ತ್ಯಾಗರಾಜನ್ ಅವರು ಹೇಳಿಕೆಯೊಂದನ್ನು ನೀಡಿ ತೇಜಸ್ವಿ ಯಾದವ್ ಅವರ ಹೆಸರು ಬಿಹಾರ ಪಶು ವಿವಿಯ ಗ್ರಂಥಾಲಯ ಕಟ್ಟಡದ ಮತಗಟ್ಟೆ ಸಂಖ್ಯೆ 204ರಲ್ಲಿದ್ದು, ಅದರ ಸರಣಿ ಸಂಖ್ಯೆ 416 ಆಗಿದೆ ಎಂದು ಅವರು ತಿಳಿಸಿದ್ದಾರೆ.
2020ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿಯವರು ಸಲ್ಲಿಸಿದ ಅಫಿಡವಿಟ್ ನಲ್ಲಿ ಮತದಾರಪಟ್ಟಿಯಲ್ಲಿ ಅವರ ಸರಣಿ ಸಂಖ್ಯೆ 511 ಆಗಿತ್ತು. ತೇಜಸ್ವಿ ಅವರ ಸರಿಯಾದ ಚುನಾವಣಾ ಗುರುತು ಚೀಟಿಯ ಸಂಖ್ಯೆ (ಎಪಿಕ್) RAB0456228. ಇದೇ ಎಪಿಕ್ ಸಂಖ್ಯೆಯು 2015ರ ಮತದಾರ ಪಟ್ಟಿಯಲ್ಲಿಯೂ ಉಲ್ಲೇಖಿತವಾಗಿತ್ತು. 2025ರ ಆಗಸ್ಟ್ 1ರಂದು ಭಾರತೀಯ ಚುನಾವಣಾ ಆಯೋಗ ಬಿಡುಗಡೆಗೊಳಿಸಿದ ಕರಡು ಮತದಾರ ಪಟ್ಟಿಯಲ್ಲಿಯೂ ಅದೇ ಎಪಿಕ್ ಸಂಖ್ಯೆಯಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ದಾಖಲೆಗಳನ್ನು ದೃಢೀಕರಿಸಿದ ಬಳಿಕ ತೇಜಸ್ವಿ ಯಾದವ್ ಅವರು ಉಲ್ಲೇಖಸಿದ್ದ ಚುನಾವಣಾ ಗುರುತುಚೀಟಿ ಸಂಖ್ಯೆ RAB2916120 ಅಸ್ತಿತ್ವದಲ್ಲಿಲ್ಲವೆಂದು ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ.