ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತನಿಗೆ ಈಡಿ ನೋಟಿಸ್
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಆರೋಪಿಸಿ ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಅರ್ಜಿ ಸಲ್ಲಿಸಿದ್ದ ವ್ಯಕ್ತಿಯನ್ನು ಎಸ್.ವಿಘ್ನೇಶ್ ಶಿಶಿರ್ ಎಂದು ಗುರುತಿಸಲಾಗಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (FEMA) ನಿಬಂಧನೆಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ಇರುವ ಎಲ್ಲ ಸಾಕ್ಷ್ಯಗಳೊಂದಿಗೆ ಸೆಪ್ಟೆಂಬರ್ 9ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿ ವಿರುದ್ಧ ಕೇಳಿ ಬಂದಿರುವ ಅರೋಪದ ಕುರಿತೂ ತನಿಖೆ ಪ್ರಗತಿಯಲ್ಲಿದೆ ಎನ್ನಲಾಗಿದೆ.
ವ್ಯಕ್ತಿಗಳು ಅಥವಾ ಕಂಪನಿಗಳ ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ಪ್ರಕರಣಗಳನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಿರಾಕರಿಸಿದೆ.
ಇದಕ್ಕೂ ಮುನ್ನ, ಲೋಕಸಭಾ ವಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂಬುದನ್ನು ಸಾಬೀತು ಮಾಡುವ ದಾಖಲೆಗಳು ಹಾಗೂ ಬ್ರಿಟನ್ ಸರಕಾರದ ಕೆಲವು ಇಮೇಲ್ ಗಳು ತಮ್ಮ ಬಳಿ ಇವೆ. ಹೀಗಾಗಿ, ಭಾರತದ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಲು ಅನರ್ಹ ಎಂದು ವಾದಿಸಿ ಎಸ್. ವಿಘ್ನೇಶ್ ಶಿಶಿರ್ ಅಲಹಾಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದರ ಬೆನ್ನಿಗೇ, ಎಸ್.ವಿಘ್ನೇಶ್ ಶಿಶಿರ್ ಗೆ ದಿನದ 24 ಗಂಟೆಯೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗಸ್ಟ್ 30ರಂದು ಕೇಂದ್ರ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಅಕ್ಟೋಬರ್ 9ಕ್ಕೆ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.