×
Ad

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ | ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್, ಸೋನು ಸೂದ್‌ ಗೆ ಈಡಿ ಸಮನ್ಸ್

Update: 2025-09-16 15:58 IST

 ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್‌ (Photo credit: NDTV)

ಹೊಸದಿಲ್ಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಗಳ ಮೂಲಕ ಕೋಟ್ಯಂತರ ರೂಪಾಯಿ ಹಣ ಹೂಡಿಕೆದಾರರಿಗೆ ವಂಚನೆ ನಡೆದಿದೆ ಎಂಬ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈಡಿ) ಮಾಜಿ ಕ್ರಿಕೆಟಿಗರು ಹಾಗೂ ಚಲನಚಿತ್ರ ನಟರಿಗೆ ಸಮನ್ಸ್ ಜಾರಿಗೊಳಿಸಿದೆ.

ಮಾಜಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್ ಮತ್ತು ನಟ ಸೋನು ಸೂದ್ ಅವರನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಉತ್ತಪ್ಪ ಅವರನ್ನು ಸೆಪ್ಟೆಂಬರ್ 22, ಯುವರಾಜ್ ಸಿಂಗ್ ಅವರನ್ನು ಸೆಪ್ಟೆಂಬರ್ 23, ಮತ್ತು ಸೋನು ಸೂದ್ ಅವರನ್ನು ಸೆಪ್ಟೆಂಬರ್ 24 ರಂದು ವಿಚಾರಣೆಗಾಗಿ ಕರೆಯಲಾಗಿದೆ.

ಇದಕ್ಕೂ ಮೊದಲು, ಇದೇ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರ ಹೇಳಿಕೆಗಳನ್ನು ಈಡಿ ದಾಖಲಿಸಿತ್ತು. ಜೊತೆಗೆ, ಸೋಮವಾರ ಟಿಎಂಸಿಯ ಮಾಜಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿ ಅವರ ವಿಚಾರಣೆ ನಡೆದಿದೆ. ಬಂಗಾಳಿ ನಟ ಅಂಕುಶ್ ಹಜ್ರಾ ಕೂಡ ಮಂಗಳವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಅದೇ ವೇಳೆ, 1xBet ನ ಭಾರತದ ಬ್ರ್ಯಾಂಡ್ ರಾಯಭಾರಿಯಾಗಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೂ ಸಮನ್ಸ್ ಜಾರಿಯಾಗಿದ್ದು, ಅವರು ಇನ್ನೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈಡಿ ಮೂಲಗಳ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಗಳ ಮೂಲಕ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದರ ಜೊತೆಗೆ ಭಾರೀ ತೆರಿಗೆ ತಪ್ಪಿಸಲಾಗಿದೆ ಎಂಬ ಗಂಭೀರ ಆರೋಪಗಳು ಹೊರಬಿದ್ದಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ 1xBet ಕಂಪನಿ 18 ವರ್ಷಗಳಿಂದ ಬೆಟ್ಟಿಂಗ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 70ಕ್ಕೂ ಹೆಚ್ಚು ಭಾಷೆಗಳಲ್ಲಿ ತನ್ನ ವೆಬ್‌ಸೈಟ್ ಹಾಗೂ ಆ್ಯಪ್ ಮೂಲಕ ಸಾವಿರಾರು ಕ್ರೀಡಾ ಕೂಟಗಳಲ್ಲಿ ಬೆಟ್ಟಿಂಗ್ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಕಂಪೆನಿಯ ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News