×
Ad

ತಿರುಚಿದ ಆಡಿಯೋ, ನಕಲಿ ಲಸಿಕೆ ಪ್ರಮಾಣ ಪತ್ರ ಸೃಷ್ಟಿಸಿ ಎರಡು ವರ್ಷ ಕೊಲೆ ರಹಸ್ಯ ಮುಚ್ಚಿಟ್ಟ ಪೊಲೀಸ್!

ತನ್ನ ಮಾಜಿ ಸಹೋದ್ಯೋಗಿಯನ್ನು ಕೊಂದು ಎರಡು ವರ್ಷಗಳ ಕಾಲ ಕೊಲೆ ರಹಸ್ಯವನ್ನು ಮುಚ್ಚಿಟ್ಟು ಪೊಲೀಸರು ಮತ್ತು ಆಕೆಯ ಕುಟುಂಬದ ಕಣ್ಣಿಗೆ ಮಣ್ಣೆರಚಿದ್ದ ದಿಲ್ಲಿಯ ವಿವಾಹಿತ ಹೆಡ್‌ಕಾನ್‌ಸ್ಟೇಬಲ್ ಓರ್ವ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Update: 2023-10-02 17:34 IST

PHOTO : NDTV

ಹೊಸದಿಲ್ಲಿ: ತನ್ನ ಮಾಜಿ ಸಹೋದ್ಯೋಗಿಯನ್ನು ಕೊಂದು ಎರಡು ವರ್ಷಗಳ ಕಾಲ ಕೊಲೆ ರಹಸ್ಯವನ್ನು ಮುಚ್ಚಿಟ್ಟು ಪೊಲೀಸರು ಮತ್ತು ಆಕೆಯ ಕುಟುಂಬದ ಕಣ್ಣಿಗೆ ಮಣ್ಣೆರಚಿದ್ದ ದಿಲ್ಲಿಯ ವಿವಾಹಿತ ಹೆಡ್‌ಕಾನ್‌ಸ್ಟೇಬಲ್ ಓರ್ವ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿ ಸುರೇಂದ್ರ ರಾಣಾ (42) ತನ್ನ ಸಹೋದ್ಯೋಗಿ ಮೋನಾಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಆತನನ್ನು ತಿರಸ್ಕರಿಸಿದಾಗ ಆಕೆಯ ಕಥೆಯನ್ನು ಮುಗಿಸಿಬಿಟ್ಟಿದ್ದ. ಸಂಕೀರ್ಣ ಸುಳ್ಳುಗಳ ಜಾಲವನ್ನು ಹೆಣೆದು ಎರಡು ವರ್ಷಗಳ ಕಾಲ ಕೊಲೆ ರಹಸ್ಯವನ್ನು ಮುಚ್ಚಿಟ್ಟುಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದ. ಮೋನಾ ಬದುಕಿದ್ದಾಳೆ ಎಂದು ಆಕೆಯ ಕುಟುಂಬವನ್ನು ನಂಬಿಸಿದ್ದ ರಾಣಾ ಅವರು ಆಕೆಯೊಂದಿಗೆ ‘ಮಾತನಾಡುವಂತೆʼಯೂ ಮಾಡಿದ್ದ. ಇದೀಗ ರಾಣಾನ ಜೊತೆ ಮೋನಾಳ ಶವವನ್ನು ಬಚ್ಚಿಡಲು ಮತ್ತು ಅಪರಾಧಕ್ಕೆ ನೆರವಾಗಿದ್ದ ಆತನ ಭಾವಂದಿರಾದ ರಾಬಿನ್ (26) ಮತ್ತು ರಾಜಪಾಲ್ (33) ಅವರನ್ನೂ ಪೊಲೀಸರು ಜೈಲಿಗಟ್ಟಿದ್ದಾರೆ.

ಮೋನಾ 2014ರಲ್ಲಿ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಸೇರಿದ್ದಳು. ಅದಕ್ಕೂ ಎರಡು ವರ್ಷಗಳ ಮುನ್ನ ರಾಣಾ ಇಲಾಖೆಯಲ್ಲಿ ನೇಮಕಗೊಂಡಿದ್ದ. ಇಬ್ಬರೂ ನಿಯಂತ್ರಣ ಕೊಠಡಿಯ ನಿರ್ವಹಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಅಲ್ಲಿ ಇಬ್ಬರೂ ಪರಸ್ಪರ ಪರಿಚಯಿಸಿಕೊಂಡಿದ್ದರು. ರಾಣಾ ಆಕೆಗೆ ಹತ್ತಿರವಾಗಲು ಪ್ರಯತ್ನಿಸಿದ್ದರೂ ಆಕೆ ಮಾತ್ರ ಆತನನ್ನು ದೂರವೇ ಇಟ್ಟಿದ್ದಳು.

ಈ ನಡುವೆ ಮೋನಾ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ನೇಮಕಗೊಂಡಿದ್ದಳು. ಹೀಗಾಗಿ ಆಕೆ ಕಾನಸ್ಟೇಬಲ್ ಹುದ್ದೆಯನ್ನು ತೊರೆದು ದಿಲ್ಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು.

ಪೊಲೀಸರ ಪ್ರಕಾರ ಮೋನಾ ಉದ್ಯೋಗವನ್ನು ತೊರೆದಿದ್ದರೂ ರಾಣಾ ಅವಳ ಮೇಲೆ ನಿಗಾಯಿರಿಸಿದ್ದ, ಇದು ಆಕೆಗೆ ಗೊತ್ತಾದಾಗ ಪ್ರತಿಭಟಿಸಿದ್ದಳು. 2021 ಸೆ.8ರಂದು ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ರಾಣಾ ಮೋನಾಳನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದ. ಚರಂಡಿಯೊಂದರಲ್ಲಿ ಶವವನ್ನು ಎಸೆದು ಅದನ್ನು ಮರೆ ಮಾಡಲು ಮೇಲೆ ಕಲ್ಲುಗಳನ್ನು ಹೇರಿದ್ದ.

ಇಷ್ಟಾದ ಬಳಿಕ ಮೋನಾಳ ಕುಟುಂಬಕ್ಕೆ ಕರೆ ಮಾಡಿ ಆಕೆ ಅರವಿಂದ ಎಂಬಾತನ ಜೊತೆಗೆ ನಾಪತ್ತೆಯಾಗಿದ್ದಾಳೆಂದು ಎಂದು ತಿಳಿಸಿದ್ದ. ಮೋನಾಳ ಕುಟುಂಬ ಸದಸ್ಯರೊಂದಿಗೆ ಸಂಪರ್ಕವನ್ನು ಮುಂದುವರಿಸಿದ್ದ ರಾಣಾ ತಾನು ಆಕೆಯನ್ನು ಹುಡುಕುತ್ತಿರುವುದಾಗಿ ಅವರನ್ನು ನಂಬಿಸಿದ್ದ. ಅವರೊಂದಿಗೆ ಪೊಲೀಸ್ ಠಾಣೆಗೂ ಹಲವಾರು ಸಲ ತೆರಳಿದ್ದ.

ಮೋನಾ ಬದುಕಿದ್ದಾಳೆ ಎಂದು ಆಕೆಯ ಕುಟುಂಬವನ್ನು ನಂಬಿಸಲು ರಾಣಾ ಮಹಿಳೆಯೋರ್ವಳಿಗೆ ಕೋವಿಡ್ ಲಸಿಕೆಯನ್ನು ಕೊಡಿಸಿದ್ದ, ಆದರೆ ಲಸಿಕೆ ಪ್ರಮಾಣಪತ್ರವನ್ನು ಮೋನಾಳ ಹೆಸರಿನಲ್ಲಿ ಪಡೆದುಕೊಂಡಿದ್ದ. ಮೋನಾ ಬದುಕಿದ್ದಾಳೆ ಮತ್ತು ತನ್ನ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದಾಳೆ ಎಂದು ಕುಟುಂಬವು ಭಾವಿಸುವಂತಾಗಲು ರಾಣಾ ಆಕೆಯ ಖಾತೆಯಿಂದ ವಹಿವಾಟುಗಳನ್ನು ನಡೆಸಿದ್ದ. ಆಕೆಯ ಸಿಮ್ ಕಾರ್ಡ್‌ನ್ನೂ ಆತ ಬಳಸಿದ್ದ.

ಕೆಲವೊಮ್ಮೆ ಮೋನಾಳ ಇರುವಿಕೆ ಬಗ್ಗೆ ತನಗೆ ಮಾಹಿತಿ ಸಿಕ್ಕಿದೆ ಎಂದು ಆಕೆಯ ‘ಹುಡುಕಾಟ’ಕ್ಕಾಗಿ ಆಕೆಯ ಕುಟುಂಬದೊಂದಿಗೆ ಐದು ರಾಜ್ಯಗಳ ವಿವಿಧ ನಗರಗಳಿಗೂ ರಾಣಾ ಭೇಟಿ ನೀಡಿದ್ದ.

ಮೋನಾಳೊಂದಿಗೆ ‘ನಾಪತ್ತೆ’ಯಾಗಿದ್ದ ಅರವಿಂದನ ಪಾತ್ರವನ್ನು ನಿರ್ವಹಿಸಲು ರಾಣಾ ತನ್ನ ಭಾವ ರಾಬಿನ್‌ನನ್ನು ಬಲೆಯಲ್ಲಿ ಬೀಳಿಸಿದ್ದ. ರಾಬಿನ್ ‘ಅರವಿಂದ’ನಂತೆ ನಟಿಸಿ ಮೋನಾಳ ಕುಟುಂಬದೊಂದಿಗೆ ಮಾತನಾಡುತ್ತಿದ್ದ. ನಾವಿಬ್ಬರೂ ಮದುವೆಯಾಗಿದ್ದೇವೆ ಎಂದು ತಿಳಿಸಿದ್ದ. ಅವರು ಮೋನಾಳಿಗೆ ಫೋನ್ ನೀಡುವಂತೆ ಕೇಳಿದಾಗ, ಆಕೆ ಹೆದರಿದ್ದಾಳೆ. ಮಾತನಾಡುವ ಮೂಡ್‌ನಲ್ಲಿ ಇಲ್ಲ ಎಂದು ನಂಬಿಸಿದ್ದ. ಪೋಲಿಸರು ಮತ್ತು ಆಕೆಯ ಕುಟುಂಬವನ್ನು ದಾರಿ ತಪ್ಪಿಸಲು ರಾಬಿನ್ ವೇಶ್ಯೆಯರೊಂದಿಗೆ ವಿವಿಧ ನಗರಗಳಿಗೆ ಹೋಟೆಲ್‌ಗಳಲ್ಲಿ ತಂಗುತ್ತಿದ್ದ ಮತ್ತು ತನ್ನೊಂದಿಗಿದ್ದ ವೇಶ್ಯೆಯ ಗುರುತಿನ ಪುರಾವೆಯಾಗಿ ಮೋನಾಳ ದಾಖಲೆಗಳನ್ನು ಅಲ್ಲಿ ನೀಡುತ್ತಿದ್ದ.

ಮೋನಾಳ ಹಲವಾರು ರೆಕಾರ್ಡೆಡ್ ಆಡಿಯೊಗಳನ್ನು ಹೊಂದಿದ್ದ ರಾಣಾ ಅವುಗಳನ್ನು ಎಡಿಟ್ ಮಾಡಿದ್ದ ಮತ್ತು ಆಕೆ ಬದುಕಿದ್ದಾಳೆ ಎಂದು ನಂಬಿಸಲು ಅವುಗಳನ್ನು ಆಕೆಯ ಕುಟುಂಬಕ್ಕೆ ಕಳುಹಿಸುತ್ತಿದ್ದ.

ಎರಡು ತಿಂಗಳುಗಳ ಹಿಂದೆ ಮೋನಾಳ ‘ನಾಪತ್ತೆ’ ಪ್ರಕರಣ ಕ್ರೈಂ ಬ್ರ್ಯಾಂಚ್‌ಗೆ ಹಸ್ತಾಂತರಗೊಂಡಾಗ ಅಧಿಕಾರಿಗಳು ಅರವಿಂದನ ಸೋಗಿನಲ್ಲಿ ಮೋನಾಳ ಕುಟುಂಬದೊಂದಿಗೆ ಮಾತನಾಡುತ್ತಿದ್ದ ರಾಬಿನ್‌ನ ಮೊಬೈಲ್ ನಂಬರ್‌ನ್ನು ಪತ್ತೆ ಹಚ್ಚಿದ್ದರು. ತನಿಖೆಯಿಂದ ಆ ಸಂಖ್ಯೆ ರಾಜಪಾಲ್‌ಗೆ ಸೇರಿದ್ದು ಎನ್ನುವುದನ್ನು ಕಂಡುಕೊಂಡಿದ್ದ ಪೊಲೀಸರು ಕೊನೆಗೂ ಸಂಚನ್ನು ಬಯಲಿಗೆಳೆಯುವಲ್ಲಿ ಸಫಲರಾಗಿದ್ದರು.

ಚರಂಡಿಯಲ್ಲಿದ್ದ ಮೋನಾಳ ಅಸ್ಥಿಪಂಜರವನ್ನು ವಶಪಡಿಸಿಕೊಂಡ ಪೊಲೀಸರು ಗುರುತು ದೃಢೀಕರಣಕ್ಕಾಗಿ ಅದನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News