ಅನಧಿಕೃತ ವ್ಯಕ್ತಿಗಳ ಬೇಡಿಕೆ ಪರಿಗಣಿಸಲಾಗದು: ಚುನಾವಣಾ ಆಯೋಗ
ಚುನಾವಣಾ ಆಯೋಗ | PC : PTI
ಹೊಸದಿಲ್ಲಿ: ತನ್ನೊಂದಿಗೆ ಮಾತುಕತೆ ನಡೆಸಲು ವಿವಿಧ ಪಕ್ಷಗಳ ಪರವಾಗಿ ಅನಧಿಕೃತ ವ್ಯಕ್ತಿಗಳು ಸಲ್ಲಿಸುವ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರಲು ಹಾಗೂ ಆಯಾ ರಾಜಕೀಯ ಪಕ್ಷಗಳ ವರಿಷ್ಠರ ಮನವಿಯನ್ನು ಮಾತ್ರ ಪರಿಗಣಿಸಲು ಚುನಾವಣಾ ಆಯೋಗ ಬುಧವಾರ ನಿರ್ಧರಿಸಿದೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ ಕುರಿತು ಚುನಾವಣಾ ಆಯೋಗದೊಂದಿಗೆ ಚರ್ಚಿಸಲು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಹಲವು ವ್ಯಕ್ತಿಗಳು ಸಮಯ ನಿಗದಿಪಡಿಸುವಂತೆ ಕೋರುತ್ತಿದ್ದಾರೆ ಎಂದು ಅದು ತಿಳಿಸಿದೆ.
ಇನ್ನು ಮುಂದೆ ಚುನಾವಣಾ ಆಯೋಗ ಅನಧಿಕೃತ ವ್ಯಕ್ತಿಗಳ ಅಂತಹ ಮನವಿಗಳನ್ನು ತಿರಸ್ಕರಿಸುತ್ತದೆ ಎಂದು ಅದು ಹೇಳಿದೆ.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ಹಲವು ರಾಜಕೀಯ ಪಕ್ಷಗಳ ಪರವಾಗಿ ಕಾಂಗ್ರೆಸ್ ನ ಕಾನೂನು ಸಲಹೆಗಾರರು ಚುನಾವಣಾ ಆಯೋಗದೊಂದಿಗೆ ಜುಲೈ 2ರಂದು ತುರ್ತು ಸಭೆ ನಡೆಸುವಂತೆ ಕೋರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 30ರಂದು ಸ್ವೀಕರಿಸಿದ ಈ ಮೇಲ್‌ನಲ್ಲಿ ಅವರು ತಾವು ಬಹುಪಕ್ಷ ನಿಯೋಗವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಪಕ್ಷಗಳ ಹೆಸರನ್ನು ಉಲ್ಲೇಖಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಆದರೆ, ಸಿಪಿಐ (ಎಂಎಲ್) ಲಿಬರೇಷನ್ ಹಾಗೂ ಸಿಪಿಐ (ಎಂ) ಮಾತ್ರ ಸಭೆಯಲ್ಲಿ ಭಾಗವಹಿಸುವ ಬಗ್ಗೆ ದೃಢಪಡಿಸಿವೆ ಎಂದು ಮೂಲಗಳು ತಿಳಿಸಿವೆ.