ಚುನಾವಣಾ ಆಯೋಗವೇನಾದರೂ ಬಿಜೆಪಿಯ ಚುನಾವಣಾ ಅಕ್ರಮದ ಶಾಖೆಯಾಗಿದೆಯೇ: ರಾಹುಲ್ ಗಾಂಧಿ ವ್ಯಂಗ್ಯ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಚುನಾವಣಾ ಆಯೋಗವು ಬಿಜೆಪಿಯ ಚುನಾವಣಾ ಕಳ್ಳತನ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗುರುವಾರ ಆರೋಪಿಸಿದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗವು ಮತದಾರರ ವಂಚನೆ ಎಸಗಲು ಬಿಜೆಪಿಗೆ ನೆರವು ನೀಡುತ್ತಿದೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಎಕ್ಸ್ ನಲ್ಲಿ ವಿಡಿಯೊವೊಂದನ್ನು ರೀಪೋಸ್ಟ್ ಮಾಡಿದ್ದು, ಅದರಲ್ಲಿ ಅಧಿಕಾರಿಗಳು ಮತದಾರರ ಅರ್ಜಿಗಳನ್ನು ಭರ್ತಿ ಮಾಡುತ್ತಿರುವುದು ಹಾಗೂ ಮತದಾರರ ಗಮನಕ್ಕೇ ಬಾರದಂತೆ ಆ ಅರ್ಜಿಗಳಿಗೆ ಸಹಿ ಮಾಡುತ್ತಿರುವುದು ಅದರಲ್ಲಿ ಕಂಡು ಬಂದಿದೆ.
ಈ ವಿಡಿಯೊದೊಂದಿಗೆ, “ಚುನಾವಣಾ ಆಯೋಗವೇನಾದರೂ ಈಗಲೂ ತಟಸ್ಥವಾಗಿಯೇ ಉಳಿದಿದೆಯೆ ಅಥವಾ ಬಿಜೆಪಿಯ ಚುನಾವಣಾ ಕಳ್ಳತನದ ಶಾಖೆಯಾಗಿದೆಯೆ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಎಕ್ಸ್ ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ಅವರು, “ಚುನಾವಣಾ ಆಯೋಗವು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಹೆಸರುಗಳನ್ನು ಕದಿಯುತ್ತಿರುವುದರಲ್ಲಿ ನೇರವಾಗಿ ಸಿಕ್ಕಿ ಬಿದ್ದಿದೆ. ಅದನ್ನು ಬಯಲುಗೊಳಿಸಿದವರ ವಿರುದ್ಧ ಎಫ್ಐಆರ್ ಅನ್ನೂ ದಾಖಲಿಸಲಾಗಿದೆ! ಚುನಾವಣಾ ಆಯೋಗವೇನಾದರೂ ಚುನಾವಣಾ ಆಯೋಗವಾಗಿಯೇ ಉಳಿದಿದೆಯೆ ಅಥವಾ ಬಿಜೆಪಿಯ ಚುನಾವಣಾ ಕಳ್ಳತನ ಶಾಖೆಯಾಗಿ ಬದಲಾಗಿದೆಯೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚುನಾವಣಾ ಆಯೋಗವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಈ ಹಿಂದೆ ಕೂಡಾ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವೆಸಗಲಾಗಿದೆ ಎಂದೂ ಅವರು ಆಪಾದಿಸಿದ್ದರು.