ಬಂಗಾಳದ ಪ್ರಸ್ತುತ ಮತದಾರರ ಪಟ್ಟಿಗಳಲ್ಲಿಯ 26 ಲಕ್ಷ ಹೆಸರುಗಳು 2002ರ ಪಟ್ಟಿಗೆ ತಾಳೆಯಾಗಿಲ್ಲ: ಚುನಾವಣಾ ಆಯೋಗ
ಚುನಾವಣಾ ಆಯೋಗ |Photo Credit : PTI
ಕೋಲ್ಕತಾ,ನ.27: ಪಶ್ಚಿಮ ಬಂಗಾಳದ ಪ್ರಸ್ತುತ ಮತದಾರರ ಪಟ್ಟಿಗಳಲ್ಲಿಯ ಸುಮಾರು 26 ಲಕ್ಷ ಮತದಾರರ ಹೆಸರುಗಳು ಹಿಂದಿನ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆದಿದ್ದ 2002ರ ಮತದಾರರ ಪಟ್ಟಿಗಳಿಗೆ ತಾಳೆಯಾಗಿಲ್ಲ ಎಂದು ಚುನಾವಣಾ ಆಯೋಗವು ವರದಿ ಮಾಡಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಮೂಲಗಳ ಪ್ರಕಾರ ಪ.ಬಂಗಾಳದಲ್ಲಿ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಡಿ ಬುಧವಾರದವರೆಗೆ ಆರು ಕೋಟಿಗೂ ಅಧಿಕ ಎಣಿಕೆ ಫಾರಂಗಳನ್ನು ಡಿಜಿಟಲೀಕರಿಸಲಾಗಿದೆ.
ಒಮ್ಮೆ ಡಿಜಿಟಲೀಕರಿಸಿದ ಬಳಿಕ ಈ ಫಾರಂಗಳನ್ನು ಮ್ಯಾಪಿಂಗ್ ಕಾರ್ಯವಿಧಾನಕ್ಕೆ ಒಳಪಡಿಸಲಾಗುತ್ತದೆ. ಅಲ್ಲಿ ಅವುಗಳನ್ನು ಹಿಂದಿನ ಎಸ್‌ಐಆರ್ ದಾಖಲೆಗಳೊಂದಿಗೆ ತಾಳೆ ಹಾಕಲಾಗುತ್ತದೆ. ರಾಜ್ಯದಲ್ಲಿಯ ಸುಮಾರು 26 ಲಕ್ಷ ಮತದಾರರ ಹೆಸರುಗಳನ್ನು ಹಿಂದಿನ ಎಸ್‌ಐಆರ್ ದಾಖಲೆಗಳೊಂದಿಗೆ ತಾಳೆ ಹಾಕಲು ಸಾಧ್ಯವಾಗಿಲ್ಲ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದರು.
ಡಿಜಿಟಲೀಕರಣ ಮುಂದುವರಿದಂತೆ ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದರು.
ಮ್ಯಾಪಿಂಗ್ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಗಳೊಂದಿಗೆ ಇತ್ತೀಚಿನ ಮತದಾರರ ಪಟ್ಟಿಗಳ ಅಡ್ಡ-ಪರಿಶೀಲನೆಯನ್ನು ಸೂಚಿಸುತ್ತದೆ.
ಈ ವರ್ಷ ಮ್ಯಾಪಿಂಗ್ ಪ್ರಕ್ರಿಯೆಯು ಇತರ ರಾಜ್ಯಗಳ ಮತದಾರರ ಪಟ್ಟಿಗಳನ್ನೂ ಒಳಗೊಂಡಿದೆ. ಇದು ಹೆಚ್ಚು ಸಮಗ್ರವಾದ ಮತ್ತು ನಿಖರ ಪರಿಶೀಲನೆ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಚುನಾವಣಾಧಿಕಾರಿ ಕಚೇರಿಯು ತೆಗೆದುಕೊಂಡಿರುವ ಕ್ರಮವಾಗಿದೆ ಎಂದು ತಿಳಿಸಿದ ಅಧಿಕಾರಿ, ಆದಾಗ್ಯೂ ಮ್ಯಾಪಿಂಗ್ ನಲ್ಲಿ ತಾಳೆಯಾಗಿಲ್ಲ ಎಂದರೆ ಅಂತಿಮ ಮತದಾರರ ಪಟ್ಟಿಗಳಿಂದ ಮತದಾರರ ಹೆಸರುಗಳು ಸ್ವಯಂಚಾಲಿತವಾಗಿ ತೆಗೆದುಹಾಕಲ್ಪಡುತ್ತವೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದರು.