ಚುನಾವಣಾ ಆಯೋಗದ ‘ತಟಸ್ಥ ನಿಲುವು’ ಪ್ರಶ್ನಾರ್ಹ: ಸಂಸತ್ ನಲ್ಲಿ ಚರ್ಚೆಗೆ ಗೌರವ್ ಗೊಗೊಯಿ ಆಗ್ರಹ
ಗೌರವ್ ಗೊಗೊಯಿ | PC : PTI
ಹೊಸದಿಲ್ಲಿ,ಆ.3: ಕೇಂದ್ರೀಯ ಚುನಾವಣಾ ಆಯೋಗವು ತಟಸ್ಥನಿಲುವನ್ನು ಹೊಂದಿದೆಯೆಂಬುದು ಈಗ ಪ್ರಶ್ನಾರ್ಹವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ರವಿವಾರ ಹೇಳಿದ್ದಾರೆ.
ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯಕಾರಿಣಿಯ ವಿಸ್ತೃತ ಸಭೆಯ ಆರಂಭಕ್ಕೆ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ಪರಿಷ್ಕರಣೆಯ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸಲು ಪ್ರತಿಪಕ್ಷಗಳು ಬಯಸುತ್ತಿವೆ ಎಂದು ಅವರು ಹೇಳಿದ್ದಾರೆ.
ಮುಖ್ಯ ಚುನಾವಣಾಧಿಕಾರಿಯನ್ನು ಕೇಂದ್ರ ಸರಕಾರವೇ ನೇಮಕಗೊಳಿಸುತ್ತದೆಯಾದರೂ, ಭಾರತೀಯ ಚುನಾವಣಾ ಆಯೋಗದ ಕುರಿತು ಸಂಸತ್ ನಲ್ಲಿ ಚರ್ಚೆ ನಡೆಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅವಕಾಶ ನೀಡುತ್ತಿಲ್ಲ ಎಂದು ಅವರು ಆಪಾದಿಸಿದರು.
‘‘ ಚುನಾವಣಾ ಆಯೋಗದ ಈ ನಿಲುವಿನ ಕುರಿತು ಜನರ ಮನಸ್ಸಿನಲ್ಲಿ ಇಂದು ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಹೀಗಾಗಿ ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಬೇಕೆಂದು ನಾವು ಬಯಸುತ್ತಿದ್ದೇವೆ. ಕೇಂದ್ರ ಸರಕಾರವು ಏನನ್ನೋ ಬಚ್ಚಿಡಲು ಯತ್ನಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅವರು ಚುನಾವಣಾ ಆಕ್ರಮಗಳನ್ನು ಎಸಗಿದ್ದಾರೆಯೇ?’’ ಎಂದು ಅಸ್ಸಾಂ ಕಾಂಗ್ರೆಸ್ ವರಿಷ್ಠರೂ ಆದ ಗೊಗೊಯಿ ಪ್ರಶ್ನಿಸಿದರು.
ಬಿಹಾರದಲ್ಲಿ ನಡೆಯುತ್ತಿರುವ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆ ಸಂಸತ್ ನಲ್ಲಿ ಮುಕ್ತವಾದ ಚರ್ಚೆಯಾಗಬೇಕು ಎಂದು ಪ್ರತಿಪಕ್ಷಗಳು ಬಯಸುತ್ತಿವೆ. ತಮ್ಮ ಮತದಾನದ ಹಕ್ಕುಗಳು ಹಾಗೂ ಮತಗಟ್ಟೆಗಳ ವಿವರಗಳ ಸ್ಥಿತಿಗತಿ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ತಮಗೆ ಈ ವಿಷಯವಾಗಿ ಚರ್ಚೆ ನಡೆಸಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಹೇಳುತ್ತಿರುವುದಾಗಿ ಗೊಗೊಯಿ ತಿಳಿಸಿದ್ದಾರೆ.
ಚುನಾವಣಾ ಆಯೋಗವು ಯಾವುದೇ ಸಚಿವಾಲಯಕ್ಕೆ ಸಂಬಂಧಿಸಿದ್ದಿಲ್ಲ.ಆದುದರಿಂದ ಸದನದಲ್ಲಿ ಅದರ ಬಗ್ಗೆ ಚರ್ಚೆ ನಡೆಯುವಂತಿಲ್ಲವೆಂಬ ಕೇಂದ್ರ ಸರಕಾರದ ವಾದ ಅಸಂಬದ್ಧವಾದುದು. ಯಾಕೆಂದರೆ ಮುಖ್ಯ ಚುನಾವಣಾ ಆಯೋಗವನ್ನು ಪ್ರಧಾನಿ ಹಾಗೂ ಕೇಂದ್ರ ಸರಕಾರ ನೇಮಿಸುತ್ತಿದೆ ಎಂದರು.