ಚುನಾವಣಾ ಆಯೋಗವು 2019ರಲ್ಲಿ ತೆಲಂಗಾಣ ಸರಕಾರ ಮತ್ತು ಖಾಸಗಿ ಕಂಪನಿಗೆ ಮತದಾರರ ದತ್ತಾಂಶಗಳನ್ನು ಲಭ್ಯವಾಗಿಸಿತ್ತು: reporters-collective.in ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಚುನಾವಣಾ ಆಯೋಗವು ದೇಶದಲ್ಲಿಯ ಎಲ್ಲ ಮತದಾರರ ವಿವರಗಳನ್ನು ಒಳಗೊಂಡಿರುವ ಡೇಟಾಬೇಸ್‌ನ್ನು ನಿರ್ವಹಿಸುತ್ತದೆ ಮತ್ತು ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸಲು ಮಾತ್ರ ಅದು ಈ ಡೇಟಾಬೇಸ್‌ನ್ನು ಬಳಸಬೇಕಾಗುತ್ತದೆ. ಇತ್ತೀಚಿಗೆ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಅವರು ಮಹಿಳಾ ಮತದಾರರ ಖಾಸಗಿತನವನ್ನು ರಕ್ಷಿಸಲು ಮತದಾನದ ವೀಡಿಯೊ ರೆಕಾರ್ಡಿಂಗ್‌ಗಳನ್ನು ಆಯೋಗವು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ, reporters-collective.in ನಡೆಸಿದ ತನಿಖೆಯು ಕನಿಷ್ಠ ಒಂದು ಸಂದರ್ಭದಲ್ಲಿ ಆಯೋಗವು ಛಾಯಾಚಿತ್ರಗಳು ಸೇರಿದಂತೆ ಮತದಾರರ ದತ್ತಾಂಶಗಳನ್ನು ತೆಲಂಗಾಣ ರಾಜ್ಯ ಸರಕಾರದೊಂದಿಗೆ ಹಂಚಿಕೊಂಡಿತ್ತು ಎನ್ನುವುದನ್ನು ಬಹಿರಂಗಗೊಳಿಸಿದೆ.
ನವೆಂಬರ್ 2019ರಲ್ಲಿ ಆಗಿನ ಟಿಆರ್‌ಎಸ್(ಈಗ ಬಿಆರ್‌ಎಸ್) ನೇತೃತ್ವದ ತೆಲಂಗಾಣ ಸರಕಾರವು ಪಿಂಚಣಿದಾರರ ಲೈವ್ ವೆರಿಫಿಕೇಷನ್ ವ್ಯವಸ್ಥೆ(ಪಿಎಲ್‌ವಿಎಸ್)ಯನ್ನು ಆರಂಭಿಸಿತ್ತು. ಇದು ಪಿಂಚಣಿದಾರರ ಜನಸಂಖ್ಯಾ ವಿವರಗಳು ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸುವ ಸಾಫ್ಟ್‌ವೇರ್ ಪ್ರಕ್ರಿಯೆಯಾಗಿದೆ. ತೆಲಂಗಾಣ ಸರಕಾರವು ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಗೊಳಿಸಲು, ಮಾರ್ಪಡಿಸಲು ಮತ್ತು ಪರೀಕ್ಷಿಸಲು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವಾಗಿರುವ ಚುನಾವಣಾ ಆಯೋಗವು ಖಾಸಗಿ ಸಂಸ್ಥೆಗಳನ್ನು ಒಳಗೊಂಡಿದ್ದ ಯೋಜನೆಗಾಗಿ ತನ್ನ ಮತದಾರರ ಡೇಟಾಬೇಸ್ ಅನ್ನು ರಾಜ್ಯ ಸರಕಾರವೊಂದರ ಜೊತೆಗೆ ಹಂಚಿಕೊಂಡ ಮೊದಲ ಪ್ರಕರಣವಾಗಿತ್ತು.
ಚುನಾವಣಾ ಆಯೋಗವು ಯಾವ ನಿಬಂಧನೆಗಳಡಿ ಈ ಡೇಟಾವನ್ನು ಮೂರನೇ ಪಕ್ಷಗಳೊಂದಿಗೆ ಹಂಚಿಕೊಂಡಿತ್ತು ಎನ್ನುವುದು ಬಹಿರಂಗಗೊಂಡಿಲ್ಲ. ಕೇಂದ್ರೀಕೃತ ಡೇಟಾಬೇಸ್ ಆಗಿರುವ ಮತದಾರರ ಪಟ್ಟಿಗಳ ಉಸ್ತುವಾರಿ ಚುನಾವಣಾ ಆಯೋಗದ್ದಾಗಿದ್ದು, ಅದರ ಅನುಮತಿಯೊಂದಿಗೆ ಮಾತ್ರ ಅದನ್ನು ಪ್ರವೇಶಿಸಬಹುದು.
2019ರಲ್ಲಿ ಹೈದರಾಬಾದ್‌ನ ಟೆಕ್ ಸಂಸ್ಥೆ ಪೊಸಿಡೆಕ್ಸ್ ಟೆಕ್ನಾಲಜೀಸ್ ಪ್ರೈ.ಲಿ.ಪಿಎಲ್‌ವಿಎಸ್‌ನಲ್ಲಿ ಕೆಲಸ ಮಾಡಿತ್ತು ಎನ್ನುವುದನ್ನು ಮಾಹಿತಿ ಹಕ್ಕು ಕಾರ್ಯಕರ್ತ ಎಸ್.ಕ್ಯೂ.ಮಸೂದ್ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ನೀಡಿರುವ ಉತ್ತರವು ಬಹಿರಂಗಗೊಳಿಸಿದೆ.
ತೆಲಂಗಾಣ ಸರಕಾರವು ನಂತರ ಈ ಪ್ರಕ್ರಿಯೆಗೆ ರಿಯಲ್ ಟೈಮ್ ಡಿಜಿಟಲ್ ಅಥೆಂಟಿಕೇಷನ್ ಆಫ್ ಐಡೆಂಟಿಟಿ(ಆರ್‌ಟಿಡಿಎಐ) ಎಂದು ಮರುನಾಮಕರಣ ಮಾಡಿತ್ತು. ಪಿಂಚಣಿ ಫಲಾನುಭವಿಗಳು ತಮ್ಮ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಬೇಕಾಗಿತ್ತು, ಅದು ಗುರುತಿನ ಮತ್ತು ಜೀವಿತ ಪುರಾವೆಯಾಗಿ ಕಾರ್ಯ ನಿರ್ವಹಿಸಿತ್ತು.
ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸ ಕೊಡಾಲಿ ಅವರು ಆ.28,2025ರಂದು ತೆಲಂಗಾಣದ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ, ತೆಲಂಗಾಣ ಸರಕಾರವು ಆರ್‌ಟಿಡಿಎಐ ಮೂಲಕ ತನ್ನ ಮುಖ ಗುರುತಿಸುವಿಕೆ ಆ್ಯಪ್‌ಗಳಿಗಾಗಿ ಮತದಾರರ ಪಟ್ಟಿಗಳಲ್ಲಿಯ ಛಾಯಾಚಿತ್ರಗಳು ಮತ್ತು ಹೆಸರುಗಳನ್ನು ಕಾನೂನಬಾಹಿರವಾಗಿ ಹಂಚಿಕೊಂಡಿದೆ ಮತ್ತು ದುರುಪಯೋಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಆರ್‌ಟಿಡಿಎಐ ತೆಲಂಗಾಣದ ಸಾರಿಗೆ, ಶಿಕ್ಷಣ ಇಲಾಖೆಗಳಿಂದ ಮತ್ತು ಸರಕಾರವು ಅಗತ್ಯವೆಂದು ಪರಿಗಣಿಸಿರುವ ಇತರ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಸಾಮಾನ್ಯ ಉದ್ದೇಶದ ಸಾಧನವಾಗಿ ಮಾರ್ಪಟ್ಟಿದೆ ಎಂದು ಅವರು ದೂರಿನಲ್ಲಿ ಬೆಟ್ಟು ಮಾಡಿದ್ದಾರೆ.
ಚುನಾವಣಾ ಆಯೋಗವು ಯಾವಾಗ ಮೊದಲ ಬಾರಿಗೆ ತೆಲಂಗಾಣಕ್ಕೆ ಮತದಾರರ ಡೇಟಾಬೇಸ್ ಅನ್ನು ಲಭ್ಯವಾಗಿಸಿತ್ತು ಮತ್ತು ಅದು ಮುಂದುವರಿದಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು reporters-collective.in ವರದಿ ಮಾಡಿದೆ.
ತನ್ನ ದೂರಿನಲ್ಲಿ ತೆಲಂಗಾಣ ಸಿಇಒರಿಂದ ಆಡಿಟ್ ಅನ್ನು ಕೋರಿರುವ ಕೊಡಾಲಿ, ಸಿಇಒ ಕಚೇರಿ ಹೊರತುಪಡಿಸಿ ಬಾಹ್ಯ ಏಜೆನ್ಸಿಗಳಿಂದ ಎಲ್ಲ ಎಪಿಕ್(ಮತದಾರರ ಗುರುತಿನ ಚೀಟಿ) ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.