ಭಾರತದಲ್ಲಿ ಸ್ಯಾಟ್ ಕಾಮ್ ಸೇವೆಗಳಿಗೆ ಪರವಾನಿಗೆ ಪಡೆದುಕೊಂಡ ಎಲಾನ್ ಮಸ್ಕ್‌ರ ಸ್ಟಾರ್ ಲಿಂಕ್
Update: 2025-06-06 21:54 IST
ಎಲಾನ್ ಮಸ್ಕ್ | PC: X
ಹೊಸದಿಲ್ಲಿ: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ದೂರಸಂಪರ್ಕ ಇಲಾಖೆ(ಡಾಟ್)ಯಿಂದ ಪರವಾನಿಗೆಯನ್ನು ಸ್ವೀಕರಿಸಿದೆ.
ಯುಟೆಲ್ ಸ್ಯಾಟ್ ಒನ್ ವೆಬ್ ಮತ್ತು ಜಿಯೊ ಸ್ಯಾಟ್‌ಲೈಟ್ ಕಮ್ಯುನಿಕೇಷನ್ಸ್ ಬಳಿಕ ಸ್ಟಾರ್ ಲಿಂಕ್ ಈ ಪರವಾನಿಗೆಯನ್ನು ಪಡೆದುಕೊಂಡಿರುವ ಮೂರನೇ ಕಂಪನಿಯಾಗಿದೆ. ಪರವಾನಿಗೆಗೆ ಅರ್ಜಿ ಸಲ್ಲಿಸಿರುವ ಅಮೆಝಾನ್ ನ ಕೈಪರ್ ಅನುಮೋದನೆಗಾಗಿ ಇನ್ನೂ ಕಾಯುತ್ತಿದೆ.
ಸ್ಟಾರ್ ಲಿಂಕ್ ಪರವಾನಿಗೆಯನ್ನು ಪಡೆದಿರುವುದನ್ನು ಶುಕ್ರವಾರ ದೃಢಪಡಿಸಿದ ಡಾಟ್ ಮೂಲಗಳು,ಕಂಪನಿಯು ಪ್ರಾಯೋಗಿಕ ಸ್ಪೆಕ್ಟ್ರಮ್ ಗಾಗಿ ಅರ್ಜಿ ಸಲ್ಲಿಸಿದ 15-20 ದಿನಗಳಲ್ಲಿ ಅದನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿವೆ.
ಸ್ಟಾರ್ ಲಿಂಕ್ ಸೇವೆಗಳನ್ನು ಆರಂಭಿಸುವ ಮುನ್ನ ಕಾನೂನುಬದ್ಧ ಪ್ರತಿಬಂಧಕ್ಕೆ ಅವಕಾಶದಂತಹ ಭದ್ರತಾ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.