ಸಮಂತಾ, ತಮನ್ನಾ ಮತ್ತಿತರ ಚಿತ್ರತಾರೆಯರ ಹೆಸರಿನ ನಕಲಿ ಮತದಾರ ಪಟ್ಟಿ ವೈರಲ್; ಹೈದರಾಬಾದ್ ಪೊಲೀಸರಿಂದ ತನಿಖೆ
Photo Credit : NDTV
ಹೊಸದಿಲ್ಲಿ,ಅ.18: ಜನಪ್ರಿಯ ತಾರೆಯರಾದ ಸಮಂತಾ ರುಥ್ ಪ್ರಭು, ತಮನ್ನಾ ಭಾಟಿಯಾ ಹಾಗೂ ರಾಕುಲ್ ಪ್ರೀತ್ ಸಿಂಗ್ ಅವರ ಹೆಸರು ಹಾಗೂ ಛಾಯಾಚಿತ್ರಗಳನ್ನು ಒಳಗೊಂಡ ನಕಲಿ ಮತದಾರಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿತ್ರತಾರೆಯರ ತಿರುಚಿದ ಛಾಯಾಚಿತ್ರಗಳನ್ನು ಹಾಗೂ ನಕಲಿ ಮತದಾರ ಗುರುತುಚೀಟಿಯ ವಿವರಗಳನ್ನು ಬಳಸಿಕೊಂಡು ಈ ನಕಲಿ ಮತದಾರಪಟ್ಟಿಯನ್ನು ತಯಾರಿಸಲಾಗಿದೆಯೆಂದು ಚುನಾವಣಾ ಅಧಿಕಾರಿಗಳು ದೃಢಪಡಿಸಿದ ಬಳಿಕ ಮಧುರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಸೈಯದ್ ಯಾಹ್ಯಾ ಕಮಲ್ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮಧುರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ನಕಲಿ ಮತದಾರಪಟ್ಟಿಯಲ್ಲಿ ಹೆಸರಿಸಲಾದ ಎಲ್ಲಾ ತಾರೆಯರು ಹೈದರಾಬಾದ್ನಲ್ಲಿ ಒಂದೇ ವಿಳಾಸವನ್ನು ನೀಡಿರುವಂತೆ ತೋರಿಸಲಾಗಿದೆ.
ಸಾರ್ವಜನಿಕರನ್ನು ತಪ್ಪುದಾರಿಗೆಳೆಯಲು ಹಾಗೂ ಅಧಿಕೃತ ಚುನಾವಣಾ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ದುರುದ್ದೇಶದ ಪ್ರಯತ್ನ ಇದಾಗಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ಗಳಾದ 336 (4) (ಇತರರ ಪ್ರತಿಷ್ಠೆಗೆ ಹಾನಿಯುಂಟು ಮಾಡುವ ಉದ್ದೇಶದಿಂದ ಫೋರ್ಜರಿ) ಹಾಗೂ 353(1)(ಸಿ) (ಸಾರ್ವಜನಿಕ ಕಿಡಿಗೇಡಿತನ) ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪೋಸ್ಟ್ ಗಳ ಮೂಲವನ್ನು ಪತ್ತೆಹಚ್ಚಲು ತೊಡಗಿದ್ದಾರೆ.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ದೃಢೀಕೃತವಲ್ಲದ ಮಾಹಿತಿಯನ್ನು ಹಂಚಿಕೊಳ್ಳುವುದು ಹಾಗೂ ಫಾರ್ವರ್ಡ್ ಮಾಡುವುದು (ಜಿಎಚ್ಎಂಸಿ)ಯು ಕಾನೂನುಕ್ರಮವನ್ನು ಎದುರಿಸಬೇಕಾಗುತ್ತದೆ. ತಿರುಚಿದ ಛಾಯಾಚಿತ್ರಗಳು ಹಾಗೂ ನಕಲಿ ಮತದಾರ ಗುರುತುಚೀಟಿಯ ಸಂಖ್ಯೆಗಳನ್ನು ಬಳಸಿಕೊಂಡು ಚಿತ್ರತಾರೆಯರನ್ನು ಮತದಾರಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 11ರಂದು ನಡೆಯಲಿರುವ ಹೈದರಾಬಾದ್ನ ಜ್ಯುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೆಲವೇ ವಾರಗಳಿರುವಾಲೇ ಈ ವೀಡಿಯೊ ಹರಿದಾಡುತ್ತಿದೆ. ಚುನಾವಣಾ ಆಯೋಗದ ಅಧಿಕೃತ ವೇದಿಕೆಗಳಲ್ಲಿ ಲಭ್ಯವಿರುವ ದೃಢೀಕೃತ ಮಾಹಿತಿಯನ್ನು ಮಾತ್ರವೇ ಮತದಾರರು ಅವಲಂಭಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.