×
Ad

́ಪಹಲ್ಗಾಮ್ ದಾಳಿಗೆ ಕಾರಣವಾದ ಲೋಪಗಳ ಹೊಣೆ ಅಮಿತ್‌ಶಾ ವಹಿಸಿಕೊಳ್ಳಬೇಕು: ಗೌರವ್ ಗೊಗೊಯಿ

Update: 2025-07-28 21:12 IST

ಗೌರವ್ ಗೊಗೊಯಿ | PC : PTI 

ಹೊಸದಿಲ್ಲಿ, ಜು. 28: ಕೇಂದ್ರ ಸರಕಾರದ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಪಹಲ್ಗಾಮ್ ದಾಳಿಗೆ ಕಾರಣವಾದ ಲೋಪಗಳ ಜವಾಬ್ದಾರಿಯನ್ನು ಗೃಹ ಸಚಿವ ಅಮಿತ್ ಶಾ ಅವರೇ ವಹಿಸಿಕೊಳ್ಳಬೇಕು ಎಂದು ಹೇಳಿದೆ. ಅಲ್ಲದೆ, ಆಪರೇಷನ್ ಸಿಂಧೂರದ ಸಂದರ್ಭ ಭಾರತದ ಎಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ಲೋಕಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರದ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಗೌರವ್ ಗೊಗೋಯಿ, ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೊಳಿಸಲು ತಾನು ವ್ಯಾಪಾರದ ಬೆದರಿಕೆಯನ್ನು ಬಳಸಿಕೊಂಡಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 26 ಬಾರಿ ಪ್ರತಿಪಾದಿಸಿರುವ ಕುರಿತಂತೆ ಕೂಡ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

‘‘ಭಾರತ ಪಾಕಿಸ್ತಾನದ ನಡುವೆ ಯುದ್ಧ ವಿರಾಮವನ್ನು ಜಾರಿಗೆ ತರಲು ತಾನು ವ್ಯಾಪಾರ ಬೆದರಿಕೆಯನ್ನು ಬಳಸಿಕೊಂಡಿದ್ದೆ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು 26 ಬಾರಿ ಪ್ರತಿಪಾದನೆ ಮಾಡಿದ್ದಾರೆ. ಐದಾರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ವಿಮಾನದ ಬೆಲೆ ಕೋಟಿಗಟ್ಟಲೆ. ಆದುದರಿಂದ ಈ ವಿಷಯವನ್ನು ನಾವು ರಕ್ಷಣಾ ಸಚಿವರಿಂದ ತಿಳಿಯಲು ಬಯಸುತ್ತೇವೆ. ಸತ್ಯವನ್ನು ಆಲಿಸಲು ದೇಶದ ಜನರಿಗೆ ಧೈರ್ಯವಿದೆ. ಎಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಬೇಕು’’ ಎಂದು ಗೊಗೋಯಿ ತಿಳಿಸಿದರು.

‘‘ಈ ಮಾಹಿತಿ, ಈ ಸತ್ಯ ಭಾರತದ ಪ್ರಜೆಗಳಿಗೆ ಮಾತ್ರವಲ್ಲ, ಇದು ಯೋಧರಿಗೆ ಕೂಡ ಮುಖ್ಯವಾಗಿದೆ. ದೇಶದಲ್ಲಿ ಕೇವಲ 35 ರಫೇಲ್ ಯುದ್ಧ ವಿಮಾನಗಳಿವೆ. ಅವುಗಳಲ್ಲಿ ಕೆಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದರೆ, ಅದು ದೊಡ್ಡ ನಷ್ಟ ಎಂಬುದು ನನ್ನ ಭಾವನೆ’’ ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷವು ಸೇನೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ, ದಾಳಿಯನ್ನು ತಡೆಯಲು ವಿಫಲವಾದ ಸರಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತಿದೆ. ಪ್ರಶ್ನೆಗಳನ್ನು ಕೇಳುವುದು ನಮ್ಮ ಪ್ರಜಾಸತ್ತಾತ್ಮಕ ಕರ್ತವ್ಯ ಎಂದು ಅವರು ಹೇಳಿದರು. ಈ ಹತ್ಯಾಕಾಂಡ ಆಂತರಿಕ ಭದ್ರತಾ ಲೋಪದ ಫಲಿತಾಂಶ, ಸೇನಾ ದೌರ್ಬಲ್ಯ ಅಲ್ಲ ಎಂದು ಅವರು ಒತ್ತಿ ಹೇಳಿದರು.

‘‘ಮೇ 10ರ ವರೆಗೆ ಪ್ರತಿಪಕ್ಷ ಸೇರಿದಂತೆ ಪ್ರತಿಯೊಬ್ಬರು ಸರಕಾರಕ್ಕೆ ಬೆಂಬಲವಾಗಿ ನಿಂತರು. ಆದರೆ, ಇದ್ದಕ್ಕಿದ್ದಂತೆ ಕದನ ವಿರಾಮ ಘೋಷಿಸಲಾಯಿತು. ಯಾಕೆ? ಒಂದು ವೇಳೆ ಪಾಕಿಸ್ತಾನ ಶರಣಾಗಲು ಸಿದ್ದವಿದ್ದರೆ, ನಾವು ನಿಲ್ಲಿಸಿದ್ದು ಯಾಕೆ ? ನಾವು ಯಾರ ಮುಂದೆ ಶರಣಾಗತರಾದೆವು’’ ಎಂದು ಗೊಗೋಯ್ ಪ್ರಶ್ನಿಸಿದ್ದಾರೆ.

►ಭಯೋತ್ಪಾದಕರು ಪಹಲ್ಗಾಮ್‌ ಗೆ ಹೇಗೆ ತಲುಪಿದರು?

ಭಯೋತ್ಪಾದಕ ದಾಳಿಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಸ್ತೃತ ವರದಿ ಮಂಡಿಸಿದ್ದಾರೆ. ಆದರೆ ಭಯೋತ್ಪಾದಕರು ಪಹಲ್ಗಾಮ್‌ ಗೆ ಹೇಗೆ ತಲುಪಿದರು ಹಾಗೂ ನಾಗರಿಕರ ಮೇಲೆ ಇಂತಹ ಮಾರಣಾಂತಿಕ ದಾಳಿಯನ್ನು ಹೇಗೆ ನಡೆಸಿದರು ಎಂಬ ನಿರ್ಣಾಯಕ ವಿಷಯದ ಕುರಿತು ಮೌನವಾಗಿಯೇ ಇದ್ದಾರೆ ಎಂದು ಗೌರವ್ ಗೊಗೋಯ್ ಹೇಳಿದ್ದಾರೆ.

‘‘ಆಪರೇಷನ್ ಸಿಂಧೂರ ಪೂರ್ಣವಾಗಿಲ್ಲ. ಪಾಕಿಸ್ತಾನ ಮತ್ತೆ ದಾಳಿ ನಡೆಸಬಹುದು ಎಂದು ಅವರು ಈಗಲೂ ಹೇಳುತ್ತಿದ್ದಾರೆ. ಹಾಗಾದರೆ, ಇದು ಯಶಸ್ಸು ಹೇಗೆ? ನಮ್ಮ ಉದ್ದೇಶ ಯುದ್ಧವಲ್ಲ ಎಂದು ಅವರು ಸ್ವತಃ ಹೇಳುತ್ತಿದ್ದಾರೆ, ಹಾಗಾದರೆ, ಯುದ್ಧ ನಿಮ್ಮ ಉದ್ದೇಶ ಆಗಿರಲಿಲ್ಲ ಯಾಕೆ? ಯುದ್ಧ, ಭೂಪ್ರದೇಶವನ್ನು ಪಶಪಡಿಸಿಕೊಳ್ಳುವುದಕ್ಕೆ ಆಗಿರಲಲ್ಲಿ ಎಂದು ಅವರು ಹೇಳುತ್ತಾರೆ. ಅದು ಅವರ ಉದ್ದೇಶ ಆಗಿರಲಿಲ್ಲ ಯಾಕೆ? ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಾವು ಯಾವಾಗ ಹಿಂದೆ ಪಡೆಯುತ್ತೇವೆ. ಇಂದು ಸಾಧ್ಯವಾಗದೇ ಇದ್ದರೆ, ಯಾವಾಗ ? ನಿಮ್ಮ ಸರಕಾರದ ಆಡಳಿತದ ಅವಧಿಯಲ್ಲಿ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿಗಳು ನಡೆದಿವೆ’’ ಎಂದು ಗೊಗೋಯಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News