×
Ad

ಉತ್ತರ ಪ್ರದೇಶ: ಕನ್ವರ್ ಯಾತ್ರಿಗೆ ಢಿಕ್ಕಿ ಹೊಡೆದಿದೆ ಎಂದು ಕಾರನ್ನು ಧ್ವಂಸಗೊಳಿಸಿದ ಕನ್ವರಿಯಾಗಳು;‌ ಕಾರು ಚಾಲಕನ ಬಂಧನ

Update: 2024-07-28 17:42 IST

ಘಾಝಿಯಾಬಾದ್: ಮುರಾದ್‌ನಗರದಲ್ಲಿ ಹೊಂಡಾ ಸಿಟಿ ಕಾರೊಂದು ಕನ್ವರ್ ಯಾತ್ರಿಗೆ ಢಿಕ್ಕಿ ಹೊಡೆದ ಘಟನೆ ಶನಿವಾರ ಸಂಭವಿಸಿದೆ. ಉದ್ರಿಕ್ತ ಕನ್ವರ್ ಯಾತ್ರಿಗಳ ಗುಂಪು ಕಾರಿಗೆ ಹಾನಿಯನ್ನುಂಟು ಮಾಡಿ ಅದನ್ನು ಬುಡಮೇಲು ಮಾಡಿದೆ.

ಗುಂಪೊಂದು ಕಾರಿನ ವಿಂಡ್ ಶೀಲ್ಡ್ ಮತ್ತು ಸೈಡ್ ವ್ಯೆ ಮಿರರ್‌ನ್ನು ಹುಡಿಗೈದು ಅದನ್ನು ಪಲ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಚಾರವನ್ನು ನಿರ್ಬಂಧಿಸಿದ್ದ ರಸ್ತೆಯನ್ನು ಪ್ರವೇಶಿಸಿದ್ದಕ್ಕಾಗಿ ಕಾರಿನ ಚಾಲಕ ಮುರಾದ್‌ನಗರ ನಿವಾಸಿ ನವಭಾಟ್ ಚೌಧರಿಯನ್ನು ಪೋಲಿಸರು ಬಂಧಿಸಿದ್ದಾರೆ.

ತಾನು ರಸ್ತೆಯಲ್ಲಿ ಹೆಚ್ಚು ದೂರ ಹೋಗುವುದಿಲ್ಲ ಎಂದು ಚೌಧರಿ ಪೋಲಿಸರಿಗೆ ಸುಳ್ಳು ಹೇಳಿದ್ದ. ಜಲಾಲಾಬಾದ್‌ಗೆ ತೆರಳುತ್ತಿದ್ದ ಆತ ಕನ್ವರ್ ಯಾತ್ರೆಗಾಗಿ ಸಂಚಾರವನ್ನು ನಿರ್ಬಂಧಿಸಿದ್ದ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಡಿಸಿಪಿ ವಿವೇಕ ಚಂದ್ರ ಯಾದವ ತಿಳಿಸಿದರು.

ಕಾರಿನ ಮೇಲೆ ಗುಂಪಿನ ದಾಳಿ ಆರಂಭವಾಗುತ್ತಿದ್ದಂತೆ ಚೌಧರಿ ಸ್ಥಳದಿಂದ ಪರಾರಿಯಾಗಿದ್ದ,ನಂತರ ಆತನನ್ನು ಬಂಧಿಸಲಾಗಿದೆ ಎಂದರು.

ಪೋಲಿಸರು ತ್ವರಿತವಾಗಿ ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದ್ದರು. ದಾಂಧಲೆ ನಡೆಸಿದ್ದ ಯಾತ್ರಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜು.21ರಂದು ಮುಝಫ್ಫರ್‌ನಗರದಲ್ಲಿಯೂ ಇಂತಹುದೇ ಘಟನೆ ನಡೆದಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News