ತಳವರ್ಗದ ಶೇ.50ರಷ್ಟು ಗ್ರಾಹಕರು ಶೇ.30ರಷ್ಟು ಮಧ್ಯಮ ವರ್ಗದವರಷ್ಟೇ ಜಿಎಸ್‌ಟಿ ಪಾವತಿಸುತ್ತಿದ್ದಾರೆ: ಅಧ್ಯಯನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಂಕಿಅಂಶ ಸಚಿವಾಲಯದ 2022-23ನೇ ಸಾಲಿನ ಗೃಹ ಬಳಕೆ ವೆಚ್ಚ ಸಮೀಕ್ಷೆ(ಎಚ್‌ಸಿಇಎಸ್)ಯನ್ನು ಬಳಸಿಕೊಂಡು ಪರೋಕ್ಷ ತೆರಿಗೆ ವ್ಯವಸ್ಥೆಯ ಪರಿಣಾಮವನ್ನು ವಿಶ್ಲೇಷಿಸಿರುವ ನೂತನ ಅಧ್ಯಯನದ ಪ್ರಕಾರ ಭಾರತದ ತಳವರ್ಗದ ಶೇ.50ರಷ್ಟು ಗ್ರಾಹಕರು ಶೇ.30ರಷ್ಟು ಮಧ್ಯಮ ವರ್ಗದವರಷ್ಟೇ ಜಿಎಸ್‌ಟಿ ಹೊರೆಯನ್ನು ಎದುರಿಸುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಗ್ರಾಹಕರಲ್ಲಿ ತಳವರ್ಗದ ಶೇ.50ರಷ್ಟು ಜನರು ಶೇ.31ರಷ್ಟು ಜಿಎಸ್‌ಟಿಯನ್ನು ಪಾವತಿಸುತ್ತಿದ್ದು, ಗ್ರಾಮೀಣ ಗ್ರಾಹಕರ ಮಧ್ಯಮ ಶೇ.30ರಷ್ಟು ಜನರೂ ಇಷ್ಟೇ ಪ್ರಮಾಣದಲ್ಲಿ ಜಿಎಸ್‌ಟಿ ಹೊರೆಯನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಅಧ್ಯಯನವು ಕಂಡುಕೊಂಡಿದೆ. ಇವು ನಗರ ಪ್ರದೇಶಗಳ ಅಂಕಿಅಂಶಗಳನ್ನು ಹೋಲುತ್ತವೆ,ಅಲ್ಲಿ ತಳವರ್ಗದ ಶೇ.29ರಷ್ಟು ಗ್ರಾಹಕರು ಶೇ.29ರಷ್ಟು ಜಿಎಸ್‌ಟಿ ಹೊರೆಯನ್ನು ಎದುರಿಸುತ್ತಿದ್ದರೆ,ಶೇ.30ರಷ್ಟು ಮಧ್ಯಮ ವರ್ಗದವರು ಶೇ.30ರಷ್ಟು ಜಿಎಸ್‌ಟಿ ಹೊರೆಯನ್ನು ಹೊತ್ತಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ಅಗ್ರ ಶೇ.20ರಷ್ಟು ಗ್ರಾಹಕರು ಹೆಚ್ಚಿನ ತೆರಿಗೆ ಹೊರೆಯನ್ನು ಎದುರಿಸುತ್ತಿದ್ದು,ಇದು ಗ್ರಾಮೀಣ ಪ್ರದೇಶಗಳಲ್ಲಿ ಶೇ.37 ಮತ್ತು ನಗರ ಪ್ರದೇಶಗಳಲ್ಲಿ ಶೇ.41 ಆಗಿದೆ.
2022-23ರ ಎಚ್‌ಸಿಇಎಸ್ ಪ್ರಕಾರ ಗ್ರಾಮೀಣ ಪ್ರದೇಶಗಳ ತಳವರ್ಗದ ಶೇ.5ರಷ್ಟು ಗ್ರಾಹಕರು 1,373 ರೂ.ಗಳ ಸರಾಸರಿ ಮಾಸಿಕ ತಲಾ ವೆಚ್ಚ (ಎಂಪಿಸಿಇ)ವನ್ನು ಹೊಂದಿದ್ದರೆ ನಗರ ಪ್ರದೇಶಗಳಲ್ಲಿ ಇದು 2,001 ರೂ.ಆಗಿತ್ತು. ಅಗ್ರ ಶೇ.5ರಲ್ಲಿ ಗ್ರಾಮೀಣ ಗ್ರಾಹಕರು 10,501 ರೂ. ಮತ್ತು ನಗರ ಪ್ರದೇಶಗಳ ಗ್ರಾಹಕರು 20,824 ರೂ.ಗಳ ವೆಚ್ಚವನ್ನು ಮಾಡಿದ್ದರು.
ದಿಲ್ಲಿಯ ಚಿಂತನ ಚಾವಡಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ(ಎನ್‌ಐಪಿಎಫ್‌ಪಿ)ಯ ಪ್ರೊ.ಸಚ್ಚಿದಾನಂದ ಮುಖರ್ಜಿ ಅವರು ಸಿದ್ಧಪಡಿಸಿರುವ ಅಧ್ಯಯನ ವರದಿಯು 2023ರ ಆಕ್ಸ್‌ಫಾಮ್ ವರದಿಗೆ ವ್ಯತಿರಿಕ್ತವಾಗಿದೆ. ಭಾರತದ ಶೇ.50ರಷ್ಟು ಕಡುಬಡವರು ಒಟ್ಟು ಜಿಎಸ್‌ಟಿ ಸಂಗ್ರಹದ ಸುಮಾರು ಮೂರನೇ ಎರಡು ಭಾಗವನ್ನು ಮತ್ತು ಶೇ.10ರಷ್ಟು ಅತಿ ಶ್ರೀಮಂತರು ಕೇವಲ ಶೇ.3-4ರಷ್ಟನ್ನು ಪಾವತಿಸುತ್ತಾರೆ ಎಂದು ಆಕ್ಸ್‌ಫಾಮ್ ವರದಿಯು ಹೇಳಿತ್ತು. ಒಟ್ಟಾರೆಯಾಗಿ ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಂಡ ಮುಖರ್ಜಿಯವರ ವಿಶ್ಲೇಷಣಾ ವರದಿಯು ತೆರಿಗೆ ನಂತರದ ಬಳಕೆ ಅಸಮಾನತೆ ಕಡಿಮೆಯಾಗಿದ್ದರಿಂದ ಜಿಎಸ್‌ಟಿ ಧನಾತ್ಮಕ ಮರುಹಂಚಿಕೆ ಪರಿಣಾಮಗಳನ್ನು ಬೀರಿದೆ ಮತ್ತು ಮಧ್ಯಮ ಪ್ರಗತಿಪರವಾಗಿದೆ ಎಂದು ಹೇಳಿದೆ.
ಹೆಚ್ಚಿನ ಆದಾಯದ ವ್ಯಕ್ತಿಗಳು ಹೆಚ್ಚಿನ ತೆರಿಗೆ ದರವನ್ನು ಪಾವತಿಸಿದಾಗ ತೆರಿಗೆ ವ್ಯವಸ್ಥೆಯನ್ನು ಪ್ರಗತಿಪರ ಎಂದು ಕರೆಯಲಾಗುತ್ತದೆ. ಹೆಚ್ಚಿನ ದೇಶಗಳು ಜಿಎಸ್‌ಟಿ ಅಥವಾ ವ್ಯಾಟ್ ಪದ್ಧತಿಯಲ್ಲಿ ಬಹು ತೆರಿಗೆ ದರಗಳನ್ನು ಅನುಸರಿಸುತ್ತಿವೆ ಎನ್ನುವುದನ್ನು ಇತ್ತೀಚಿನ ವರದಿಗಳು ತೋರಿಸಿವೆ. ಉದಾಹರಣೆಗೆ ಐರೋಪ್ಯ ಒಕ್ಕೂಟವು ಬಹು ತೆರಿಗೆ ದರ ವ್ಯವಸ್ಥೆಯನ್ನು ಅನುಸರಿಸುತ್ತಿದ್ದು ಇದೇ ರೀತಿಯ ಮಧ್ಯಮ ಪ್ರಗತಿಪರ ಫಲಿತಾಂಶವನ್ನು ಪಡೆಯುತ್ತಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಖರ್ಜಿ ಹೇಳಿದರು.
ಜಿಎಸ್‌ಟಿ ತೆರಿಗೆ ಸ್ವರೂಪದಲ್ಲಿ ಪ್ರಮಖ ಬದಲಾವಣೆಗಳ ಕುರಿತು ಚರ್ಚೆಯ ನಡುವೆಯೇ ಈ ಅಧ್ಯಯನ ವರದಿ ಹೊರಬಿದ್ದಿದೆ.
ಒಮ್ಮತವನ್ನು ರೂಪಿಸಲು ಮತ್ತು ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭಾಗೀದಾರರೊಂದಿಗೆ ಮಾತುಕತೆಗಳನ್ನು ಆರಂಭಿಸಲಿದ್ದಾರೆ ಎಂದು ಸುದ್ದಿಸಂಸ್ಥೆಯು ಈ ತಿಂಗಳ ಪೂರ್ವಾರ್ಧದಲ್ಲಿ ವರದಿ ಮಾಡಿತ್ತು. ಕೆಲವು ಸರಕುಗಳನ್ನು ಶೇ.5ರ ಸ್ಲ್ಯಾಬ್‌ಗೆ ಮತ್ತು ಇತರ ಸರಕುಗಳನ್ನು ಶೇ.18ರ ಸ್ಲ್ಯಾಬ್‌ಗೆ ಸ್ಥಳಾಂತರಿಸುವ ಮೂಲಕ ಶೇ.12 ಜಿಎಸ್‌ಟಿ ದರವನ್ನು ತೆಗೆದುಹಾಕುವುದು ಪ್ರಸ್ತಾವಗಳಲ್ಲಿ ಸೇರಿದೆ.