ಇಂಡಿಗೊ ಬಿಕ್ಕಟ್ಟು | ಟಿಕೆಟ್‌ಗಳ ಬೆಲೆ 40,000ರೂ. ತಲುಪಿದ್ದು ಹೇಗೆ?: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಚಾಟಿ
Photo| indiatoday
ಹೊಸದಿಲ್ಲಿ: ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದ ಇಂಡಿಗೋಗೆ ಸಾವಿರಾರು ವಿಮಾನಗಳ ರದ್ದತಿಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ದಿಲ್ಲಿ ಹೈಕೋರ್ಟ್ ಬುಧವಾರ ಕೇಂದ್ರ ನಿರ್ದೇಶನ ನೀಡಿದೆ. ವಿಮಾನಯಾನದ ದರಗಳು 40,000 ರೂ.ಗೆ ಏರಿರುವುದನ್ನು ತಡೆಯುವಲ್ಲಿ ವಿಫಲವಾದ ಕೇಂದ್ರವನ್ನು ಅದು ತರಾಟೆಗೆ ತೆಗೆದುಕೊಂಡಿತು.
ಪರಿಸ್ಥಿತಿಯನ್ನು ಆತಂಕಕಾರಿ ಎಂದು ಹೇಳಿದ ದಿಲ್ಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ನೇತೃತ್ವದ ವಿಭಾಗೀಯ ಪೀಠವು, ಇದರಿಂದಾಗಿ ಪ್ರಯಾಣಿಕರಿಗೆ ಅನಾನುಕೂಲತೆ ಮಾತ್ರವಲ್ಲ, ಇದರಿಂದಾಗುವ ಆರ್ಥಿಕ ಪರಿಣಾಮದ ಬಗ್ಗೆಯೂ ಬೆಳಕು ಚೆಲ್ಲಿದೆ.
ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಪರಿಹಾರ ನೀಡಲು ನಾಗರಿಕ ವಿಮಾನಯಾನ ಸಚಿವಾಲಯ, ಡಿಜಿಸಿಎ ಮತ್ತು ಇಂಡಿಗೋ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೈಕೋರ್ಟ್ ಹೇಳಿದೆ.
ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಅವಕಾಶ ನೀಡಿದ್ದಕ್ಕಾಗಿ ಮತ್ತು ಬಿಕ್ಕಟ್ಟು ಭುಗಿಲೆದ್ದ ನಂತರವೇ ಕ್ರಮ ಕೈಗೊಂಡಿದ್ದಕ್ಕಾಗಿ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
"ವಿಮಾನ ಹಾರಾಟದಲ್ಲಿ ಬಿಕ್ಕಟ್ಟು ಇದ್ದಲ್ಲಿ, ಅದನ್ನು ಇತರ ವಿಮಾನಯಾನ ಸಂಸ್ಥೆಗಳು ಲಾಭ ಪಡೆಯಲು ಹೇಗೆ ಅನುಮತಿಸಬಹುದು? ವಿಮಾನಯಾನ ಟಿಕೆಟ್ ದರ 35-40 ಸಾವಿರಕ್ಕೆ ತಲುಪಲು ಹೇಗೆ ಸಾಧ್ಯ? ನೀವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ ಎಂದು ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿತು.
ಇಂತಹ ಪರಿಸ್ಥಿತಿ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟುಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅದು ನ್ಯಾಯಾಲಯವು ಕಳವಳ ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಈಗಾಗಲೇ ಆ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.