ಹಿಮಾಚಲ ಪ್ರದೇಶ ಮೇಘ ಸ್ಪೋಟ | ಮಂಡಿ ಮತ್ತು ಕುಲುವಿನಿಂದ ಕಾಣೆಯಾಗಿದ್ದ 29 ಮಂದಿ ಮೃತಪಟ್ಟಿರುವ ಶಂಕೆ: ಶೋಧ ಕಾರ್ಯಾಚರಣೆ ಸ್ಥಗಿತ
PC : PTI
ಕುಲು: ಜೂನ್ 30 ಹಾಗೂ ಜುಲೈ 1ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ನಾಪತ್ತೆಯಾಗಿರುವ 27 ಮಂದಿ ಹಾಗೂ ಕುಲುವಿನಿಂದ ನಾಪತ್ತೆಯಾಗಿರುವ ಇಬ್ಬರನ್ನು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಬುಧವಾರ ಜಿಲ್ಲಾಡಳಿತ ಪ್ರಕಟಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹಂತಹಂತವಾಗಿ ಈಗಾಗಲೇ ಹಿಂಪಡೆಯಲಾಗಿದೆ. ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 15 ದಿನಗಳ ಹಿಂದೆ ಮೇಘ ಸ್ಫೋಟಕ್ಕೆ ಗುರಿಯಾಗಿದ್ದ ಮಂಡಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿತ್ತು. ಈ ವಿನಾಶಕಾರಿ ಪ್ರವಾಹದಲ್ಲಿ ಇಲ್ಲಿಯವರೆಗೆ 15 ಮೃತದೇಹಗಳನ್ನು ಸಿಕ್ಕಿದ್ದು ಉಳಿದ 27 ಮಂದಿಯ ಯಾವುದೇ ಸುಳಿವು ದೊರೆತಿಲ್ಲ.
ಡ್ರೋನ್ ಬಳಸಿ ರಕ್ಷಣಾ ತಂಡಗಳ ನೆರವಿನೊಂದಿಗೆ ಶೋಧ ತಂಡಗಳು ಥುನಾಗ್, ಗೋಹರ್, ಕರ್ಸೋಗ್ ಹಾಗೂ ಧರ್ಮಾಪುರ್ ಉಪ ವಿಭಾಗಗಳಲ್ಲಿ ಹಾಗೂ ಬಿಯಾಸ್ ಮತ್ತು ಸಟ್ಲೇಜ್ ನದಿಗಳ ದಂಡಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದರೂ, ಯಾವುದೇ ಗಮಹಾರ್ಹ ಯಶಸ್ಸು ದೊರೆತಿಲ್ಲ.
ಮತ್ತೊಂದೆಡೆ, ಜೂನ್ 25ರಂದು ಕುಲು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ವೇಳೆ ನಾಪತ್ತೆಯಾಗಿದ್ದ ಇಬ್ಬರನ್ನೂ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ಶೋಧ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇಲ್ಲಿಯವರೆಗೆ ಮೂವರ ಮೃತದೇಹಗಳನ್ನು ಪತ್ತೆ ಹಚ್ಚಿದ್ದು, ಈ ಪೈಕಿ ಕಡೆಯದಾಗಿ 13 ವರ್ಷದ ಮೂರ್ತಿ ಎಂಬ ಬಾಲಕನ ಮೃತ ದೇಹವನ್ನು ವಶಪಡಿಸಿಕೊಂಡಿತ್ತು. ಆದರೆ, ಇನ್ನಿಬ್ಬರು ಬದುಕುಳಿದಿರುವ ಯಾವುದೇ ಸುಳಿವು ಇದುವರೆಗೂ ದೊರೆತಿಲ್ಲ.