2027ರ ಜನಗಣತಿ ನಡೆಸಲು 14,619 ಕೋಟಿ ರೂ. ಕೋರಿದ ಕೇಂದ್ರ ಗೃಹ ಸಚಿವಾಲಯ: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ)ದ ಅಧೀನದಲ್ಲಿರುವ ಭಾರತದ ರಿಜಿಸ್ಟ್ರಾರ್ ಜನರಲ್(ಆರ್‌ಜಿಐ) 2027ರ ಜನಗಣತಿಯನ್ನು ನಡೆಸಲು 14,618.95 ಕೋ.ರೂ.ಗಳ ಬಜೆಟ್ ಕೋರಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಮೊದಲ ಡಿಜಿಟಲ್ ಜನಗಣತಿಯಾಗಲಿರುವ ಇದು ಜಾತಿ ದತ್ತಾಂಶಗಳನ್ನೂ ಸಂಗ್ರಹಿಸಲಿದೆ ಎಂದು indianexpress.com ವರದಿ ಮಾಡಿದೆ.
ಆರ್‌ಜಿಐ ಈಗಾಗಲೇ ಸರಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೌಲ್ಯಮಾಪನ ಮಾಡುವ ವಿತ್ತ ಸಚಿವಾಲಯದ ಅಧೀನದ ವೆಚ್ಚ ಹಣಕಾಸು ಸಮಿತಿ(ಇಎಫ್‌ಸಿ)ಗೆ ಅನುಮೋದನೆಯನ್ನು ಕೋರಿ ಟಿಪ್ಪಣಿಯನ್ನು ಸಲ್ಲಿಸಿದೆ. ಇಎಫ್‌ಸಿ ಅನುಮೋದಿಸಿದ ಬಳಿಕ ಎಂಎಚ್‌ಎ ಕೇಂದ್ರ ಸಂಪುಟದ ಅನುಮತಿಗಾಗಿ ಪ್ರಸ್ತಾವವನ್ನು ಸಲ್ಲಿಸಲಿದೆ.
ಜನಗಣತಿಯ ಎರಡೂ ಹಂತಗಳಿಗೆ ಹಣಕಾಸನ್ನು ಕೋರಲಾಗಿದೆ. ಮೊದಲ ಹಂತವು 2026, ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಡೆಯಲಿದ್ದು,ಎರಡನೇ ಹಂತವು ಫೆಬ್ರವರಿ 2027ರಲ್ಲಿ ಆರಂಭಗೊಳ್ಳಲಿದೆ.
ಬಲ್ಲ ಮೂಲಗಳ ಪ್ರಕಾರ ಮುಂದಿನ ಜನಗಣತಿಯು ಮೊದಲ ಡಿಜಿಟಲ್ ಜನಗಣತಿಯಾಗಲಿದ್ದು,ಇದಕ್ಕಾಗಿಯೇ ಅಭಿವೃದ್ಧಿಗೊಳಿಸಲಾದ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಸ್ವಯಂ ಎಣಿಕೆಯ ಆಯ್ಕೆಯನ್ನೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿದ್ದು,ಜಾತಿ ದತ್ತಾಂಶಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಲಾಗುವುದು. ಎ.30ರಂದು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ನಿರ್ಧರಿಸಿತ್ತು. ಇಡೀ ಜನಗಣತಿ ಪ್ರಕ್ರಿಯೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಆರ್‌ಜಿಐ ಸೆನ್ಸಸ್ ಮಾನಿಟರಿಂಗ್ ಆ್ಯಂಡ್ ಮಾನಿಟರಿಂಗ್ ಸಿಸ್ಟಮ್(ಸಿಎಂಎಂಎಸ್) ಎಂಬ ಆ್ಯಪ್‌ನ್ನೂ ಅಭಿವೃದ್ಧಿಗೊಳಿಸುತ್ತಿದೆ ಎನ್ನಲಾಗಿದೆ.
ಜನಗಣತಿಯನ್ನು ನಡೆಸಲು 35 ಲಕ್ಷಕ್ಕೂ ಅಧಿಕ ಎಣಿಕೆದಾರರು ಮತ್ತು ಮೇಲ್ವಿಚಾರಕರನ್ನು ನಿಯೋಜಿಸಲಾಗುವುದು. ಇದು 2011ರಲ್ಲಿ ನಡೆದಿದ್ದ ಜನಗಣತಿಗಾಗಿ ನಿಯೋಜಿಸಲಾಗಿದ್ದ 27 ಲಕ್ಷ ಸಿಬ್ಬಂದಿಗಳಿಗೆ ಹೋಲಿಸಿದರೆ ಶೇ.30ರಷ್ಟು ಅಧಿಕವಾಗಿದೆ.
ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾದ ಜನಗಣತಿ ಆರು ವರ್ಷಗಳಷ್ಟು ವಿಳಂಬಗೊಂಡಿರುವುದು ಇದೇ ಮೊದಲು. 2021ರ ಜನಗಣತಿಯನ್ನು 2020,ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ಮತ್ತು 2011,ಫೆಬ್ರವರಿ 9ರಿಂದ 28ರವರೆಗೆ ಹೀಗೆ ಎರಡು ಹಂತಗಳಲ್ಲಿ ನಡೆಸಲು ಯೋಜಿಸಲಾಗಿತ್ತಾದರೂ ಕೋವಿಡ್ ಸಾಂಕ್ರಾಮಿಕದಿಂದಾಗಿ ಅದು ಸಾಧ್ಯವಾಗಿರಲಿಲ್ಲ.
1872ರಿಂದ ಪ್ರತಿ ಹತ್ತುವರ್ಷಗಳಿಗೊಮ್ಮೆ ನಿರಂತರವಾಗಿ ಜನಗಣತಿ ನಡೆದಿದ್ದು,2027ರ ಜನಗಣತಿಯು ಒಟ್ಟಾರೆಯಾಗಿ 16ನೇ ಮತ್ತು ಸ್ವತಂತ್ರ ಭಾರತದ ಎಂಟನೇ ಜನಗಣತಿಯಾಗಲಿದೆ.
2011ರ ಜನಗಣತಿಯ ಪ್ರಕಾರ ಮಾ.1,2011ರಂದು ದೇಶದ ಜನಸಂಖ್ಯೆ 121 ಕೋಟಿ ಆಗಿತ್ತು. ಈ ವರ್ಷ ಇದು 141 ಕೋ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. 2027ರಲ್ಲಿ ಅಂದಾಜು 143.6 ಕೋಟಿ ಜನಸಂಖ್ಯೆಯೊಂದಿಗೆ ಜನಗಣತಿ ವೆಚ್ಚವು ಪ್ರತಿ ವ್ಯಕ್ತಿಗೆ ಸುಮಾರು 101.8 ರೂ.ಆಗಲಿದೆ ಎಂದು ವರದಿಯಾಗಿದೆ.