ಹೈದರಾಬಾದ್ ನಲ್ಲಿ ಅಗ್ನಿ ಅವಘಡ | ಜನರನ್ನು ರಕ್ಷಿಸಿದ ಮುಸ್ಲಿಂ ಯುವಕರನ್ನು ಪ್ರಶಂಸಿಸಿದ ಮಾಧವಿ ಲತಾ; ಎಐಎಂಐಎಂನಿಂದ ಸನ್ಮಾನ
ಮಾಧವಿ ಲತಾ | credit : siasat.com
ಹೈದರಾಬಾದ್: ರವಿವಾರ ಹೈದರಾಬಾದ್ ನ ಚಾರ್ಮಿನಾರ್ ಬಳಿಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಲು ಯತ್ನಿಸಿದ್ದ ಮುಸ್ಲಿಂ ವ್ಯಕ್ತಿಗಳನ್ನು ಬಿಜೆಪಿ ನಾಯಕಿ ಮಾಧವಿ ಲತಾ ಪ್ರಶಂಸಿಸಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ವೇಳೆ, ಆಗಷ್ಟೇ ನಮಾಝ್ ಮುಗಿಸಿಕೊಂಡು ಮರಳುತ್ತಿದ್ದ ಜನರನ್ನು ರಕ್ಷಿಸಿದ ಸಾಹಸಿಗಳು ಟೀ ಕುಡಿಯಲೆಂದು ಅಂಗಡಿಯೊಂದರ ಬಳಿ ನಿಂತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಹಾಗೂ ಆ್ಯಂಬುಲೆನ್ಸ್ ಗಳು ಧಾವಿಸುವುದಕ್ಕೂ ಮುನ್ನ, ಅವರು 13 ಮಂದಿಯನ್ನು ರಕ್ಷಿಸಿದ್ದರು ಎಂದು ವರದಿಯಾಗಿದೆ.
ಇದರ ಬೆನ್ನಿಗೇ, ಹೈದರಾಬಾದ್ ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಜನರನ್ನು ಜೀವದ ಹಂಗು ತೊರೆದು ರಕ್ಷಿಸಲು ಯತ್ನಿಸಿದ ಸಾಹಸಿಗಳಾದ ಮೀರ್ ಝಹೇದ್ ಹಾಗೂ ಮುಹಮ್ಮದ್ ಅಝ್ಮತ್ ಎಂಬ ಯುವಕರನ್ನು ಎಐಎಂಐಎಂ ಪಕ್ಷ ಸನ್ಮಾನಿಸಿದೆ.
ಈ ಸಾಹಸಿಗಳು ತಮ್ಮ ಸುರಕ್ಷತೆಯ ಬಗ್ಗೆ ಯೋಚಿಸದೆ ಜನರನ್ನು ರಕ್ಷಿಸಲು ಮುಂದಾಗುವ ಹೊತ್ತಿಗೆ ಅಗ್ನಿ ಅವಘಡದಲ್ಲಿ ಅದಾಗಲೇ ಕೆಲವು ವ್ಯಕ್ತಿಗಳು ಮೃತಪಟ್ಟಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಈ ಇಬ್ಬರು, “ಇಬ್ಬರು ಮಹಿಳೆಯರು “ಅಣ್ಣಾ ನಮ್ಮನ್ನು ಕಾಪಾಡಿ” ಎಂದು ನೆರವಿಗಾಗಿ ಮೊರೆ ಇಟ್ಟಾಗ ನಾವು ಕಟ್ಟಡದೊಳಕ್ಕೆ ನುಗ್ಗಿದೆವು” ಎಂದು ತಿಳಿಸಿದ್ದಾರೆ.
“ನಾವು ಅಡ್ಡವಿದ್ದ ಎರಡು ತಡೆಗೋಡೆಗಳನ್ನು ಕೆಡವಿ ಕೊಠಡಿಯನ್ನು ಪ್ರವೇಶಿಸಿದಾಗ, ಮಹಿಳೆಯರು ಹಾಗೂ ಮಕ್ಕಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡಿರುವುದು ಕಂಡು ಬಂದಿತು” ಎಂದು ಅವರು ಹೇಳಿದ್ದಾರೆ.
ಅಗ್ನಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಿದ ಸಾಹಸಿ ಮುಸ್ಲಿಂ ಯುವಕರನ್ನು ಬಿಜೆಪಿ ನಾಯಕಿ ಮಾಧವಿ ಲತಾ ಪ್ರಶಂಸಿಸಿದರು. ಹೈದರಾಬಾದ್ ನಲ್ಲಿ ನಡೆದಿರುವ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಲ್ಝಾರ್ ಹೌಸ್ ನಲ್ಲಿ ವಾಸಿಸುತ್ತಿರುವ ಜನರನ್ನೇ ರಕ್ಷಿಸಲು ಸಾಧ್ಯವಾಗದಿರುವಾಗ, ಆ್ಯಂಬುಲೆನ್ಸ್ ಗಳು ಹಾಗೂ ಅಗ್ನಿಶಾಮಕ ವಾಹನಗಳು ತೆರಳಲು ಸಾಧ್ಯನವಾಗದ ಇಕ್ಕಟಾದ ಓಣಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ, ಅಂತಹ ಕಡೆ ವಾಸಿಸುತ್ತಿರುವ ಜನರನ್ನು ಹೇಗೆ ರಕ್ಷಿಸಲು ಸಾಧ್ಯ ಎಂದು ಅವರು ರಾಜ್ಯ ಸರಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ರವಿವಾರ 17 ಮಂದಿಯನ್ನು ಬಲಿ ಪಡೆದ ಹೈದರಾಬಾದ್ ನ ಐತಿಹಾಸಿಕ ಚಾರ್ಮಿನಾರ್ ಬಳಿಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡವು ಇತ್ತೀಚಿನ ವರ್ಷಗಳಲ್ಲಿ ಹೈದರಾಬಾದ್ ನಲ್ಲಿ ಸಂಭವಿಸಿರುವ ಭೀಕರ ದುರಂತ ಎಂದು ಹೇಳಲಾಗಿದೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲೂ ಅಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಜಾಗತಿಕ ಶ್ಲಾಘನೆಗೆ ಒಳಗಾಗಿತ್ತು. ಈ ಭಯೋತ್ಪಾದಕ ದಾಳಿಯ ಘಟನೆಯ ಸಂದರ್ಭದಲ್ಲಿ ಭಯೋತ್ಪಾದಕನೊಬ್ಬನಿಂದ ಬಂದೂಕು ಕಿತ್ತುಕೊಳ್ಳಲು ಯತ್ನಿಸಲು ಮುಂದಾಗಿ, ಆತನ ಗುಂಡೇಟಿಗೆ ಬಲಿಯಾಗಿದ್ದ ಸ್ಥಳೀಯ ಕುದುರೆ ಸವಾರ ಸೈಯದ್ ಆದಿಲ್ ಹುಸೈನ್ ರ ದಿಟ್ಟತನ ಕೂಡಾ ಈ ವೇಳೆ ತೀವ್ರ ಪ್ರಶಂಸೆಗೆ ಪಾತ್ರವಾಗಿತ್ತು.