×
Ad

ಕುಟುಂಬದೊಳಗಿನ ಗೊಂದಲವನ್ನು ನಾನೇ ಬಗೆಹರಿಸಲಿದ್ದೇನೆ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್

Update: 2025-11-18 11:55 IST

Photo credit: PTI

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಎದುರಿಸಿದ ಸೋಲಿನ ಬೆನ್ನಲ್ಲೇ ಯಾದವ್ ಕುಟುಂಬದೊಳಗೆ ಉಂಟಾದ ಕಲಹದ ಬಗ್ಗೆ ಪಕ್ಷಾಧ್ಯಕ್ಷ ಲಾಲು ಪ್ರಸಾದ್ ಯಾದವ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಕುಟುಂಬದೊಳಗಿನ ಗೊಂದಲವನ್ನು ತಾನೇ ಬಗೆಹರಿಸಲಿದ್ದೇನೆ ಎಂದು ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಲಾಲೂ ಪ್ರಸಾದ್ ಅವರ ಕುಟುಂಬದೊಳಗಿನ ಕಲಹ ರವಿವಾರ ಬಹಿರಂಗವಾಗಿತ್ತು. ಆ ನಂತರ, ಸೋಮವಾರ ಪಾಟ್ನಾದಲ್ಲಿ ನಡೆದ ನೂತನವಾಗಿ ಆಯ್ಕೆಯಾದ ಆರ್‌ಜೆಡಿ ಶಾಸಕರ ಸಭೆಯಲ್ಲಿ ಲಾಲು ಅವರು ಮಾತನಾಡಿದರು.

“ಇದು ಕುಟುಂಬದ ಆಂತರಿಕ ವಿಷಯ. ಕುಟುಂಬದೊಳಗೇ ಪರಿಹರಿಸಲಾಗುತ್ತದೆ. ಇದನ್ನು ನಿಭಾಯಿಸಲು ನಾನು ಇದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾಗಿ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ಸಭೆಯಲ್ಲಿ ರಾಬ್ರಿ ದೇವಿ, ಮಿಸಾ ಭಾರತಿ, ಜಗದಾನಂದ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು. ತೇಜಸ್ವಿ ಚುನಾವಣೆಯಲ್ಲಿ ಬಹಳಷ್ಟು ಶ್ರಮಿಸಿದ್ದಾರೆ ಎಂದು ಲಾಲು ಸಭೆಯಲ್ಲಿ ಹೇಳಿದರು. ಇದೇ ವೇಳೆ ತೇಜಸ್ವಿ ಯಾದವ್ ಅವರನ್ನು ಮತ್ತೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು.

ಈ ಬಾರಿ 243 ಸ್ಥಾನಗಳಲ್ಲಿ ಆರ್‌ಜೆಡಿ ಕೇವಲ 25 ಸ್ಥಾನಗಲ್ಲಷ್ಟೇ ಗೆಲವು ಸಾಧಿಸಿದ್ದು, 2010ನ ನಂತರದ ಪಕ್ಷದ ಎರಡನೇ ಅತೀ ದುರ್ಬಲ ಫಲಿತಾಂಶ ಇದಾಗಿದೆ.

ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಪಾಟ್ನಾದ ಸರ್ಕ್ಯುಲರ್ ರಸ್ತೆಯ ನಿವಾಸದಲ್ಲಿ ತೇಜಸ್ವಿ ಯಾದವ್ ಮತ್ತು ಅವರ ಅಕ್ಕ ರೋಹಿಣಿ ಆಚಾರ್ಯ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ.

ರವಿವಾರ ಮಧ್ಯಾಹ್ನ ರೋಹಿಣಿ ಆಚಾರ್ಯ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿ, ಕುಟುಂಬವನ್ನು ತೊರೆದು ರಾಜಕೀಯದಿಂದ ದೂರ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದರು.

ತೇಜಸ್ವಿ ಯಾದವ್ ಅವರ ಆಪ್ತರಾದ ಸಂಜಯ್ ಯಾದವ್ ಮತ್ತು ರಮೀಝ್ ನೆಮತ್ ಖಾನ್ ತಮ್ಮ ಮೇಲೆ ಒತ್ತಡ ಹೇರಿರುವುದಾಗಿ ಅವರು ಪೋಸ್ಟ್‌ನಲ್ಲಿ ಆರೋಪಿಸಿದ್ದರು.

“ಸಂಜಯ್, ರಮೀಝ್ ಅಥವಾ ತೇಜಸ್ವಿಯ ಹೆಸರು ತೆಗೆದರೆ ಮನೆಯ ಹೊರಗೆ ಹಾಕುತ್ತಾರೆ. ನನಗೆ ಈಗ ಕುಟುಂಬವಿಲ್ಲ,” ಎಂದು ರೋಹಿಣಿ ಸುದ್ದಿಗಾರರೊಂದಿಗೆ ಹೇಳಿದ್ದರು.

2022ರಲ್ಲಿ ತಂದೆ ಲಾಲು ಯಾದವ್ ಅವರಿಗೆ ತಾವೇ ದಾನ ಮಾಡಿದ್ದ ಮೂತ್ರಪಿಂಡವನ್ನೇ ‘ಕೊಳಕು’ ಎಂದು ನಿಂದಿಸಲಾಯಿತು ಎಂದು ರೋಹಿಣಿ ಗಂಭೀರ ಆರೋಪ ಮಾಡಿದ್ದಾರೆ.

“ನನ್ನ ದೇವರಾದ ತಂದೆಯನ್ನು ಉಳಿಸಲು ಮೂತ್ರಪಿಂಡ ಕೊಟ್ಟಿದ್ದೇನೆ. ಅದೇ ಇಂದು ನನ್ನ ತಪ್ಪಾಗಿದೆ,” ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದರು.

ರೋಹಿಣಿಯೊಂದಿಗೆ ಇನ್ನೂ ಮೂವರು ಸಹೋದರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಯಾದವ್ ಕೂಡ 10 ಸರ್ಕ್ಯುಲರ್ ರಸ್ತೆ ನಿವಾಸವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News