×
Ad

ಭಾರತ-ಪಾಕ್ ಸಂಘರ್ಷ | ರಾಜಕೀಯ ನಾಯಕತ್ವದ ನಿರ್ಬಂಧಗಳಿಂದಾಗಿ IAF ತನ್ನ ಯುದ್ಧವಿಮಾನವನ್ನು ಕಳೆದುಕೊಂಡಿತ್ತು ಎಂದ ರಕ್ಷಣಾ ಅಧಿಕಾರಿ; ವರದಿ

Update: 2025-06-29 20:37 IST

ಹೊಸದಿಲ್ಲಿ: ಮೇ 7ರಂದು ಪಾಕಿಸ್ತಾನದಲ್ಲಿಯ ಭಯೋತ್ಪಾದನೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸಿದ್ದ ಭಾರತೀಯ ವಾಯುಪಡೆ(IAF)ಯು ತನ್ನ ಯುದ್ಧವಿಮಾನಗಳನ್ನು ಕಳೆದುಕೊಂಡಿತ್ತು, ಪಾಕಿಸ್ತಾನದ ಮಿಲಿಟರಿ ಸ್ಥಾವರಗಳು ಅಥವಾ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ನಡೆಸದಂತೆ ರಾಜಕೀಯ ನಾಯಕತ್ವವು ವಿಧಿಸಿದ್ದ ನಿರ್ಬಂಧವು ಇದಕ್ಕೆ ಏಕಮಾತ್ರ ಕಾರಣವಾಗಿತ್ತು ಎಂದು ಇಂಡೋನೇಷ್ಯಾದಲ್ಲಿಯ ಭಾರತೀಯ ರಾಯಭಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ನೌಕಾಪಡೆಯ ಅಧಿಕಾರಿ ಕ್ಯಾ.ಶಿವಕುಮಾರ್ ಪ್ರತಿಪಾದಿಸಿದ್ದಾರೆ. ಕಳೆದ ತಿಂಗಳು ಇಂಡೋನೇಶ್ಯಾದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು thewire.in ವರದಿ ಮಾಡಿದೆ.

‘ಪಾಕಿಸ್ತಾನ-ಭಾರತ ವಾಯು ಯುದ್ಧದ ವಿಶ್ಲೇಷಣೆ ಮತ್ತು ವೈಮಾನಿಕ ಶಕ್ತಿಯ ದೃಷ್ಟಿಕೋನದಿಂದ ಇಂಡೋನೇಶ್ಯಾದ ನಿರೀಕ್ಷಿತ ಕಾರ್ಯತಂತ್ರಗಳು’ ಕುರಿತು ವಿಚಾರ ಸಂಕಿರಣವನ್ನು ಇಂಡೋನೇಶ್ಯಾದ ಯುನಿವರ್ಸಿಟಾಸ್ ದಿರ್ಗಂತರ ಮಾರ್ಸೆಕಲ್ ಸೂರ್ಯದರ್ಮ(ವಿವಿ) ಜೂ.10ರಂದು ಆಯೋಜಿಸಿತ್ತು. ವಿಚಾರ ಸಂಕಿರಣದಲ್ಲಿ ತನ್ನ 35 ನಿಮಿಷಗಳ ಪ್ರಸ್ತುತಿಯಲ್ಲಿ ಶಿವಕುಮಾರ್, ಭಾರತವು ಕೆಲವು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎನ್ನುವುದನ್ನು ಒಪ್ಪಿಕೊಂಡರು.

ವಾಯು ಯುದ್ಧದ ಆರಂಭಿಕ ಹಂತದಲ್ಲಿ IAF ಪಾಕಿಸ್ತಾನ ಸೇನೆಯಿಂದ ನಷ್ಟಗಳನ್ನು ಅನುಭವಿಸಿತ್ತು. ರಫೇಲ್‌ ಗಳು ಸೇರಿದಂತೆ ಆರು ಭಾರತೀಯ ಯುದ್ಧವಿಮಾನಗಳನ್ನು ತಾವು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿಕೊಂಡಿದ್ದರೆ, ಕೆಲವು ವಿಮಾನಗಳನ್ನು ಕಳೆದುಕೊಂಡಿದ್ದನ್ನು ಮಾತ್ರ ಭಾರತೀಯ ಅಧಿಕಾರಿಗಳು ದೃಢಪಡಿಸಿದ್ದರು. ನಿರ್ದಿಷ್ಟ ಸಂಖ್ಯೆಯನ್ನು ಬಹಿರಂಗಗೊಳಿಸಲು ಅವರು ನಿರಾಕರಿಸಿದ್ದರು.

ನಂತರ ಸಿಂಗಾಪುರದಲ್ಲಿ ಬ್ಲೂಮಬರ್ಗ್‌ ಗೆ ನೀಡಿದ್ದ ಸಂದರ್ಶನದಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರು,‘ನಾವು ಕಳೆದುಕೊಂಡಿರುವ ವಿಮಾನಗಳ ಸಂಖ್ಯೆ ಮುಖ್ಯವಲ್ಲ, ಅವುಗಳನ್ನು ನಾವು ಏಕೆ ಕಳೆದುಕೊಂಡೆವು ಎನ್ನುವುದು ಮುಖ್ಯ’ ಎಂದು ಒತ್ತಿ ಹೇಳಿದ್ದರು.

‘ನಷ್ಟದ ಬಳಿಕ ನಾವು ನಮ್ಮ ಕಾರ್ಯತಂತ್ರಗಳನ್ನು ಬದಲಿಸಿಕೊಂಡಿದ್ದೆವು ಮತ್ತು ಮಿಲಿಟರಿ ಸ್ಥಾವರಗಳ ಮೇಲೆ ದಾಳಿ ನಡೆಸಿದ್ದೆವು. ನಾವು ಮೊದಲು ಶತ್ರುವಿನ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಗ್ರಹಿಸಿದ್ದೆವು,ಇದರಿಂದಾಗಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿಕೊಂಡು ನಮ್ಮ ಎಲ್ಲ ದಾಳಿಗಳು ಸುಗಮವಾಗಿ ನಡೆದಿದ್ದವು’ ಎಂದು ಶಿವಶಂಕರ್ ನುಡಿದರು. ಬಹುಶಃ ಅವರು ಮೇ 10ರಂದು ವಿವಿಧ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಭಾರತದ ದಾಳಿಗಳನ್ನು ಉಲ್ಲೇಖಿಸಿದ್ದರು.

ಶಿವಶಂಕರ್ ಅವರ ಅಭಿಪ್ರಾಯವು ಒಂದು ನಿರ್ಣಾಯಕ ಅಂಶವನ್ನು ಎತ್ತಿ ತೋರಿಸಿದೆ; IAF ಯುದ್ಧವಿಮಾನಗಳು ಪಾಕಿಸ್ತಾನಿ ಮಿಲಿಟರಿ ಸ್ಥಾವರಗಳು ಅಥವಾ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಳ್ಳದಂತೆ ಮೋದಿ ಸರಕಾರದ ಕಟ್ಟುನಿಟ್ಟಾದ ರಾಜಕೀಯ ಆದೇಶಗಳಡಿ ಕಾರ್ಯ ನಿರ್ವಹಿಸುತ್ತಿದ್ದವು. ಸರಕಾರದಿಂದ ಈ ಸ್ವಯಂ ನಿರ್ಬಂಧವು ಪರಮಾಣು ಪರಿಸರದಲ್ಲಿ ಸಂಘರ್ಷವು ಉಲ್ಬಣಗೊಳ್ಳುವುದನ್ನು ತಡೆಯುವ ಉದ್ದೇಶವನ್ನು ಹೊಂದಿತ್ತು. ಬಹುಶಃ ಇದು ಭಾರತವು ಪಾಕಿಸ್ತಾನದ ಯಾವುದೇ ಮಿಲಿಟರಿ ಸ್ಥಾವರಗಳ ಮೇಲೆ ದಾಳಿ ನಡೆಸದಿದ್ದಾಗ ಪಾಕ್ ಸೇನೆಯು ಭಾರತೀಯ ವಾಯುಪ್ರದೇಶದಲ್ಲಿ ಹಾರಾಡುವ ಭಾರತೀಯ ಯುದ್ಧ ವಿಮಾನಗಳನ್ನು ಗುರಿಯಾಗಿಸಿಕೊಳ್ಳುವುದಿಲ್ಲ ಎಂಬ ಸಾಮಾನ್ಯ ತರ್ಕವನ್ನು ಆಧರಿಸಿತ್ತು.

ಆದರೆ ಪಾಕಿಸ್ತಾನವು ಇಂತಹ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲ, ಇದರಿಂದಾಗಿ IAF ತನ್ನ ಯುದ್ಧವಿಮಾನಗಳನ್ನು ಕಳೆದುಕೊಂಡಿತು ಎಂದು thewire.in ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News