×
Ad

ರಾಜಸ್ಥಾನ : ರತನ್‌ಗಢ ಬಳಿ ವಾಯುಪಡೆಯ ಜಾಗ್ವಾರ್ ಜೆಟ್ ಅಪಘಾತ; ಪೈಲಟ್ ಸಹಿತ ಇಬ್ಬರು ಮೃತ್ಯು

Update: 2025-07-09 14:19 IST

Photo credit: indiatoday.in

ಹೊಸದಿಲ್ಲಿ: ರಾಜಸ್ಥಾನದ ಚುರು ಜಿಲ್ಲೆಯ ರತನ್‌ಗಢ ತಾಲೂಕಿನ ಭಾನುಡಾ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ವಾಯುಪಡೆಯ ಜಾಗ್ವಾರ್ ಜೆಟ್ ಪತನಗೊಂಡಿದೆ ಎಂದು ವರದಿಯಾಗಿದೆ.

ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಪೊಲೀಸರು, ಸೇನೆ ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರು. ಪರಿಶೀಲನೆ ವೇಳೆ ವಾಯುಪಡೆಯ ಜಾಗ್ವಾರ್ ಜೆಟ್ ವಿಮಾನದ ಅವಶೇಷಗಳ ಬಳಿ ಪೈಲೆಟ್ ಸಹಿತ ಇಬ್ಬರ ಮೃತದೇಹವು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹಗಳ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

ಘಟನೆಯ ಬಳಿಕ ಸಮೀಪದ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಬೆಳಗ್ಗೆ ಆಕಾಶದಲ್ಲಿ ಭೀಕರ ಶಬ್ದ ಕೇಳಿಸಿಕೊಂಡಿದ್ದು, ತಕ್ಷಣವೇ ಹೊಲಗಳಲ್ಲಿ ಬೆಂಕಿ ಮತ್ತು ಗಾಢ ಹೊಗೆ ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚುರು ಜಿಲ್ಲಾಧಿಕಾರಿ ಅಭಿಷೇಕ್ ಸುರಾನಾ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಹೊಲಗಳಲ್ಲಿ ಗ್ರಾಮಸ್ಥರು ತಾವಾಗಿ ನೀರು ಸುರಿದು ಕಿಡಿಯನ್ನು ನಂದಿಸಲು ಹರಸಾಹಸ ಪಟ್ಟರು ಎಂದು ತಿಳಿದು ಬಂದಿದೆ.

ಅಪಘಾತದ ಶಬ್ದದಿಂದ ಗಾಬರಿಗೊಂಡ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರಬಂದಿದ್ದು, ಕೆಲವು ಗಂಟೆಗಳ ಕಾಲ ಭೀತಿಯ ವಾತಾವರಣ ಮನೆಮಾಡಿತ್ತು.

ವಾಯುಪಡೆಯು ಘಟನೆಯ ನಿಖರ ಕಾರಣವನ್ನು ತನಿಖೆಯ ನಂತರ ಬಹಿರಂಗಪಡಿಸಲಿದೆ. ತಾಂತ್ರಿಕ ದೋಷ, ಹವಾಮಾನ ಅಥವಾ ಪೈಲೆಟ್ ತಪ್ಪಿನಿಂದ ಅಪಘಾತ ಸಂಭವಿಸಿರಬಹುದೇ ಎಂಬುದರ ಕುರಿತು ಮಾಹಿತಿ ತಿಳಿದು ಬರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News