ಐಸಿಸಿ ಟಿ20 ರ‍್ಯಾಂಕಿಂಗ್ | ಸೂರ್ಯಕುಮಾರ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್ | PTI
ದುಬೈ: ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್ ಬುಧವಾರ ಬಿಡುಗಡೆಯಾಗಿದ್ದು, ಭಾರತದ ಸೂರ್ಯಕುಮಾರ್ ಯಾದವ್ ನಂ.1 ಸ್ಥಾನ ಕಳೆದುಕೊಂಡಿದ್ದಾರೆ.
2023ರ ಡಿಸೆಂಬರ್ನಿಂದ ಅಗ್ರಮಾನ್ಯ ಟಿ20 ಬ್ಯಾಟರ್ ಆಗಿರುವ ಯಾದವ್ ಅವರನ್ನು ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಹಿಂದಿಕ್ಕಿದ್ದಾರೆ. ಹೆಡ್ ಈಗ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ವಿರುದ್ಧ ಸೋಮವಾರ ನಡೆದಿದ್ದ ಸೂಪರ್-8 ಪಂದ್ಯದಲ್ಲಿ 76 ರನ್ ಗಳಿಸಿದ್ದರು. ಸ್ಥಿರ ಪ್ರದರ್ಶನ ನೀಡಿರುವ ಹೆಡ್ 4 ಸ್ಥಾನ ಭಡ್ತಿ ಪಡೆದು ನಂ.1 ಸ್ಥಾನಕ್ಕೇರಿದ್ದಾರೆ. ಯಾದವ್, ಫಿಲ್ ಸಾಲ್ಟ್, ಬಾಬರ್ ಆಝಮ್ ಹಾಗೂ ಮುಹಮ್ಮದ್ ರಿಝ್ವಾನ್ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.
ವೆಸ್ಟ್ಇಂಡೀಸ್ ನ ಜಾನ್ಸನ್ ಚಾರ್ಲ್ಸ್ ಅಗ್ರ-10ರೊಳಗೆ ಪ್ರವೇಶಿಸಿದ್ದಾರೆ. ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಝ್ 5 ಸ್ಥಾನ ಭಡ್ತಿ ಪಡೆದಿದ್ದಾರೆ.
ಆಲ್ರೌಂಡರ್ ಗಳ ರ‍್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯದ ಮಾರ್ಕಸ್ ಸ್ಟೋಯಿನಿಸ್ ನಂ.1 ಸ್ಥಾನ ಕಳೆದುಕೊಂಡು 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ನಂ.1 ಸ್ಥಾನ ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಹಾಗೂ ಭಾರತದ ಹಾರ್ದಿಕ್ ಪಾಂಡ್ಯ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.