×
Ad

ಉತ್ತರಾಖಂಡದ 13 ಜಿಲ್ಲೆಗಳ ಪೈಕಿ 11ರಲ್ಲಿ ಹೊರ ರಾಜ್ಯದವರು ಜಮೀನು ಖರೀದಿಸುವಂತಿಲ್ಲ!

Update: 2025-05-02 07:45 IST

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

PC:  x.com/ANINewsUP

ಡೆಹ್ರಾಡೂನ್: ಉತ್ತರಾಖಂಡದ 13 ಜಿಲ್ಲೆಗಳ ಪೈಕಿ 11ರಲ್ಲಿ ಹೊರರಾಜ್ಯದ ಜನರು ಕೃಷಿಭೂಮಿ ಖರೀದಿಸುವುದನ್ನು ನಿರ್ಬಂಧಿಸುವ ಉತ್ತರಾಖಂಡ (ಉತ್ತರಪ್ರದೇಶ ಜಮೀನ್ದಾರಿ ನಿರ್ಮೂಲನೆ ಮತ್ತು ಭೂ ನಿರ್ವಹಣೆ ಕಾಯ್ದೆ-1950) (ತಿದ್ದುಪಡಿ) ಮಸೂದೆ-2025ಕ್ಕೆ ಉತ್ತರಾಖಂಡ ರಾಜ್ಯಪಾಲ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅನುಮೋದನೆ ನೀಡಿದ್ದಾರೆ. ಹರಿದ್ವಾರ ಮತ್ತು ಉಧಾಂಸಿಂಗ್ ನಗರ ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿರುತ್ತವೆ.

ಈ ಬೆಳವಣಿಗೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗುರುವಾರ ಸಂಜೆ ಎಕ್ಸ್ ಪೋಸ್ಟ್ ನಲ್ಲಿ ದೃಢಪಡಿಸಿದ್ದಾರೆ. ಬಜೆಟ್ ಅಧಿವೇಶನದ ವೇಳೆ ಫೆಬ್ರುವರಿ 20ರಂದು ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. "ಇದು ಈಗಾಗಲೇ ಸೇರಿರುವ ಮತ್ತು ಕಾಲದಿಂದ ಕಾಲಕ್ಕೆ ಸೇರುವ ಯಾವುದೇ ಮಹಾನಗರ ಪಾಲಿಕೆ, ನಗರ ಪಂಚಾಯ್ತಿ, ನಗರ ಪಾಲಿಕೆ ಮತ್ತು ಕಂಟೋನ್ಮೆಂಟ್ ಬೋರ್ಡ್ ಪ್ರದೇಶಗಳನ್ನು ಹೊರತುಪಡಿಸಿ ಇಡೀ ಉತ್ತರಾಖಂಡಕ್ಕೆ ವಿಸ್ತರಣೆಗೊಳ್ಳಲಿದೆ. ಇದು ತಕ್ಷಣದಿಂದ ಜಾರಿಗೆ ಬರಲಿದೆ" ಎಂದು ಕಾನೂನು ವಿವರಿಸಿದೆ.

ಈ ಕಾನೂನಿನ ಅನ್ವಯ, ಇತರ ರಾಜ್ಯಗಳ ಜನತೆ ಇಲ್ಲಿ ಕೃಷಿಭೂಮಿ ಖರೀದಿಸಲು ಉದ್ದೇಶಿಸಿದರೆ, ಇಡೀ ಉತ್ತರಾಖಂಡದಲ್ಲಿ ವಸತಿ ಉದ್ದೇಶಕ್ಕಾಗಿ 250 ಚದರ ಮೀಟರ್ ಗಿಂತ ಹೆಚ್ಚು ಭೂಮಿಯನ್ನು ಖರೀದಿಸಿಲ್ಲ ಎಂಬ ಬಗ್ಗೆ ಉಪ ನೋಂದಣಾಧಿಕಾರಿಗಳ ಬಳಿ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಜಮೀನು ಖರೀದಿಸಿದವರು ಅನುಮೋದಿತ ಉದ್ದೇಶಕ್ಕೆ ಹೊರತುಪಡಿಸಿ ಇತರ ಉದ್ದೇಶಕ್ಕೆ ಬಳಸಿದರೆ ಅಥವಾ ಮಾರಾಟ ಮಾಡಿದರೆ, ಉಡುಗೊರೆ ರೂಪದಲ್ಲಿ ನೀಡಿದರೆ ಅಥವಾ ಅನುಮತಿ ಪಡೆಯದೇ ವರ್ಗಾವಣೆ ಮಾಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ರಾಜ್ಯದ ಸಂಪನ್ಮೂಲಗಳನ್ನು ರಕ್ಷಿಸುವ, ಸಾಂಸ್ಕøತಿಕ ಪರಂಪರೆ ಮತ್ತು ಜನತೆಯ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಈ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದು ಧಾಮಿ ಸ್ಪಷ್ಟಪಡಿಸಿದ್ದಾರೆ. ಇದು ರಾಜ್ಯದ ಜನತೆಯ ಭಾವನೆಗಳಿಗೆ ಅನುಗುಣವಾಗಿ ಉತ್ತರಾಖಂಡದಲ್ಲಿ ಕೃಷಿ ಹಾಗೂ ತೋಟಗಾರಿಕಾ ಭೂಮಿಯನ್ನು ಅನಿಯಂತ್ರಿತವಾಗಿ ಮಾರಾಟ ಮಾಡುವ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲಿದೆ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News