×
Ad

ಅತ್ಯಂತ ಹೆಚ್ಚಿನ ಅಸಮಾನತೆಯ ದೇಶಗಳ ಸಾಲಿನಲ್ಲಿ ಭಾರತ: ವರದಿ

ಶೇ.1ರಷ್ಟು ಶ್ರೀಮಂತರ ಬಳಿ ಶೇ.40 ಸಂಪತ್ತು

Update: 2025-12-10 21:22 IST

ಸಾಂದರ್ಭಿಕ ಚಿತ್ರ | Photo Credit : PTI 

ಹೊಸದಿಲ್ಲಿ,ಡಿ.10: ಬುಧವಾರ ಬಿಡುಗಡೆಗೊಂಡ 2026ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಅಗ್ರ ಶೇ.1ರಷ್ಟು ಜನರು ಶೇ.40ರಷ್ಟು ಸಂಪತ್ತನ್ನು ಹೊಂದಿದ್ದು, ಇದರೊಂದಿಗೆ ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಅಸಮಾನತೆಯನ್ನು ಹೊಂದಿರುವ ದೇಶಗಳ ಸಾಲಿಗೆ ಸೇರಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅಸಮಾನತೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಎಂದು ವರ್ಲ್ಡ್ ಇನ್‌ಈಕ್ವಾಲಿಟಿ ಲ್ಯಾಬ್ ಪ್ರಕಟಿಸಿರುವ ಅಧ್ಯಯನ ವರದಿಯು ತಿಳಿಸಿದೆ.

ಶೇ.10ರಷ್ಟು ಅತ್ಯಂತ ಶ್ರೀಮಂತರು ಶೇ.65ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.

ಆದಾಯ ಅಸಮಾನತೆ ಕುರಿತಂತೆ ವರದಿಯು,ಆದಾಯವನ್ನು ಹೊಂದಿರುವ ಅಗ್ರ ಶೇ.10ರಷ್ಟು ಜನರು ರಾಷ್ಟ್ರೀಯ ಆದಾಯದ ಸುಮಾರು ಶೇ.58ರಷ್ಟನ್ನು ಗಳಿಸುತ್ತಿದ್ದಾರೆ. ಆದರೆ ಜನಸಂಖ್ಯೆಯ ತಳಸ್ತರದ ಶೇ.50ರಷ್ಟು ಜನರು ಕೇವಲ ಶೇ.15ರಷ್ಟು ಆದಾಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ವರದಿಯ ಪ್ರಕಾರ 2014 ಮತ್ತು 2024ರ ನಡುವೆ ಅಗ್ರ ಶೇ.10 ಮತ್ತು ತಳಸ್ತರದ ಶೇ.50ರಷ್ಟು ಜನಸಂಖ್ಯೆಯ ನಡುವಿನ ಆದಾಯ ಅಂತರವು ಸ್ಥಿರವಾಗಿತ್ತು.

ಖರೀದಿ ಸಾಮರ್ಥ್ಯ ಸಮಾನತೆಯ ಆಧಾರದಲ್ಲಿ ಸರಾಸರಿ ವಾರ್ಷಿಕ ಆದಾಯವು ಪ್ರತಿ ವ್ಯಕ್ತಿಗೆ ಸುಮಾರು 6,200 ಯುರೋಗಳಷ್ಟಿದೆ. (ಸುಮಾರು 6.49 ಲಕ್ಷ ರೂ.)

ಖರೀದಿ ಸಾಮರ್ಥ್ಯ ಸಮಾನತೆಯು ಒಂದು ಆರ್ಥಿಕ ಸೂತ್ರವಾಗಿದ್ದು, ಒಂದೇ ಪ್ರಮಾಣದ ಹಣದಿಂದ ವಿವಿಧ ದೇಶಗಳಲ್ಲಿ ಏನನ್ನು ಖರೀದಿಸಬಹುದು ಎನ್ನುವುದನ್ನು ಲೆಕ್ಕ ಹಾಕುವ ಮೂಲಕ ವಿವಿಧ ಕರೆನ್ಸಿಗಳ ಮೌಲ್ಯವನ್ನು ಹೋಲಿಸುತ್ತದೆ.

ಖರೀದಿ ಸಾಮರ್ಥ್ಯ ಸಮಾನತೆಯ ಆಧಾರದಲ್ಲಿ ಸರಾಸರಿ ಸಂಪತ್ತು ಸುಮಾರು 28,000 ಯುರೋಗಳಷ್ಟಿದೆ (ಸುಮಾರು 29.31 ಲ.ರೂ.).

ಮಹಿಳಾ ಕಾರ್ಮಿಕ ಪಾಲ್ಗೊಳ್ಳುವಿಕೆಯು ಶೇ.15.7ರಷ್ಟು ತುಂಬ ಕಡಿಮೆ ಮಟ್ಟದಲ್ಲಿದ್ದು,ಕಳೆದೊಂದು ದಶಕದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ವರದಿಯು ತಿಳಿಸಿದೆ.

ಒಟ್ಟಾರೆಯಾಗಿ ಭಾರತದಲ್ಲಿ ಅಸಮಾನತೆಯು ಆದಾಯ, ಸಂಪತ್ತು ಮತ್ತು ಲಿಂಗ ಆಯಾಮಗಳಲ್ಲಿ ಆಳವಾಗಿ ಬೇರೂರಿದ್ದು,ಇದು ಆರ್ಥಿಕತೆಯೊಳಗಿನ ನಿರಂತರ ರಚನಾತ್ಮಕ ವಿಭಜನೆಗಳನ್ನು ಎತ್ತಿ ತೋರಿಸಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಜಾಗತಿಕ ಪ್ರವೃತ್ತಿಗಳು

ಜಾಗತಿಕವಾಗಿ ಸಂಪತ್ತು ಐತಿಹಾಸಿಕವಾಗಿ ಉತ್ತುಂಗಕ್ಕೇರಿದೆ,ಆದರೆ ತುಂಬ ಅಸಮಾನವಾಗಿ ಹಂಚಿಕೆಯಾಗಿದೆ ಎಂದು ಹೇಳಿರುವ ವರದಿಯು,ಅಗ್ರ ಶೇ.0.001ರಷ್ಟು ಶ್ರೀಮಂತರು,ಅಂದರೆ 60,000ಕ್ಕಿಂತ ಕಡಿಮೆ ಬಹುಕೋಟ್ಯಧಿಪತಿಗಳು ವಿಶ್ವ ಜನಸಂಖ್ಯೆಯ ಕೆಳಗಿನ ಶೇ.50ರಷ್ಟು ಜನರ ಒಟ್ಟು ಸಂಪತ್ತಿನ ಮೂರು ಪಟ್ಟು ಸಂಪತ್ತನ್ನು ಹೊಂದಿದ್ದಾರೆ.

ಜಗತ್ತಿನ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಕೆಳಗಿನ ಶೇ.90ರಷ್ಟು ಜನರ ಒಟ್ಟು ಸಂಪತ್ತಿಗಿಂತ ಹೆಚ್ಚಿನ ಸಂಪತ್ತು ಅಗ್ರ ಶೇ.1ರಷ್ಟು ಶ್ರೀಮಂತರ ಬಳಿಯಲ್ಲಿಯೇ ಇದೆ ಎಂದು ತಿಳಿಸಿದೆ.

ಜಾಗತಿಕ ಹಣಕಾಸು ವ್ಯವಸ್ಥೆಯು ಶ್ರೀಮಂತ ದೇಶಗಳ ಪರವಾಗಿ ವಾಲಿರುವುದು ಮಂದುವರಿದಿದೆ ಎಂದೂ ವರದಿಯು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News