ತಿರುಪತಿ ದೇವಸ್ಥಾನಕ್ಕೆ ಕೋಟ್ಯಂತರ ರೂ. ವಂಚನೆ: ರೇಷ್ಮೆ ಹೆಸರಿನಲ್ಲಿ ಪಾಲಿಸ್ಟರ್ ಶಾಲುಗಳ ಮಾರಾಟ
ತಿರುಮಲ ದೇವಸ್ಥಾನ | Photo Credit : PTI
ತಿರುಪತಿ,ಡಿ.10: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ಸ್(ಟಿಟಿಡಿ) ಟ್ರಸ್ಟ್ 2015ರಿಂದ 2025ರವರೆಗೆ 10 ವರ್ಷಗಳ ಅವಧಿಯಲ್ಲಿ ನಡೆದ 54 ಕೋ.ರೂ.ಗಳ ಬೃಹತ್ ರೇಷ್ಮೆ ಶಾಲು ಹಗರಣ ಬೆಳಕಿಗೆ ಬರುವುದರೊಂದಿಗೆ ತತ್ತರಿಸಿದೆ.
ಇತ್ತೀಚಿಗಷ್ಟೇ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಮತ್ತು ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಸದ್ದು ಮಾಡಿದ್ದವು.
ಆಂತರಿಕ ಜಾಗ್ರತ ವಿಚಾರಣೆಯಲ್ಲಿ ಈ ಹಗರಣ ಬೆಳಕಿಗೆ ಬಂದಿದೆ.
ಗುತ್ತಿಗೆದಾರನೋರ್ವ ಟೆಂಡರ್ ದಾಖಲೆಗಳಲ್ಲಿ ನಿರ್ದಿಷ್ಟಗೊಳಿಸಿದ್ದ ಶುದ್ಧ ಮಲ್ಬೆರಿ ರೇಷ್ಮೆ ಉತ್ಪನ್ನದ ಹೆಸರಿನಲ್ಲಿ ಶೇ.100ರಷ್ಟು ಪಾಲಿಸ್ಟರ್ ಶಾಲುಗಳನ್ನು ನಿರಂತರವಾಗಿ ಪೂರೈಸುವ ಮೂಲಕ ತಿರುಪತಿ ತಿಮ್ಮಪ್ಪನಿಗೇ ಪಂಗನಾಮ ಹಾಕಿದ್ದನ್ನು ವಿಚಾರಣೆಯು ಬಹಿರಂಗಗೊಳಿಸಿದೆ.
ಬಿ.ಆರ್.ನಾಯ್ಡು ಅಧ್ಯಕ್ಷರಾಗಿರುವ ಟಿಟಿಡಿ ಶಾಲುಗಳ ಗುಣಮಟ್ಟದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಬಳಿಕ ತನಿಖೆಯನ್ನು ನಡೆಸಲಾಗಿತ್ತು. ಗುತ್ತಿಗೆದಾರ ಪ್ರಮುಖ ದಾನಿಗಳಿಗೆ ನೀಡಲಾಗುವ ಮತ್ತು ವೇದಾಶೀರ್ವಾಚನದಂತಹ ದೇವಸ್ಥಾನದ ವಿಧಿಗಳಲ್ಲಿ ಬಳಸಲಾಗುವ ಶುದ್ಧ ಮಲ್ಬೆರಿ ರೇಷ್ಮೆ ಶಾಲುಗಳ ಬದಲಾಗಿ ಅಗ್ಗದ ಪಾಲಿಸ್ಟರ್ ಶಾಲುಗಳನ್ನು ಪೂರೈಸಿದ್ದಾನೆ. ಕಳೆದ ಹತ್ತು ವರ್ಷಗಳಿಂದಲೂ ಈ ಅಕ್ರಮ ನಡೆದುಕೊಂಡು ಬಂದಿದೆ ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ದೇವಸ್ಥಾನ ಟ್ರಸ್ಟ್‌ಗೆ 54 ಕೋ.ರೂ.ಗೂ ಅಧಿಕ ನಷ್ಟವಾಗಿದೆ.
‘ಸುಮಾರು 350 ರೂ.ಬೆಲೆಯ ಶಾಲಿಗೆ 1,300 ರೂ.ಬಿಲ್ ಮಾಡಲಾಗುತ್ತಿತ್ತು. ಒಟ್ಟೂ ಪೂರೈಕೆ 50 ಕೋ.ರೂ.ಗಳನ್ನು ಮೀರಿದೆ. ಭ್ರಷ್ಟಾಚಾರ ನಿಗ್ರಹ ಘಟಕದಿಂದ (ಎಸಿಬಿ) ತನಿಖೆಯನ್ನು ನಾವು ಕೋರಿದ್ದೇವೆ’ ಎಂದು ನಾಯ್ಡು ತಿಳಿಸಿದರು.
ಶಾಲುಗಳು ಶುದ್ಧ ರೇಷ್ಮೆಯ ಬದಲಾಗಿ ಪಾಲಿಸ್ಟರ್‌ನಿಂದ ತಯಾರಾಗಿದ್ದನ್ನು ಪ್ರಯೋಗಾಲಯ ಪರೀಕ್ಷೆಗಳು ದೃಢಪಡಿಸಿವೆ.
ಪೂರೈಕೆಯಾಗಿದ್ದ ಶಾಲುಗಳಲ್ಲಿ ಕಡ್ಡಾಯ ರೇಷ್ಮೆ ಹಾಲೋಗ್ರಾಮ್ ಇರಲಿಲ್ಲ ಎನ್ನುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸದ್ರಿ ಅವಧಿಯಲ್ಲಿ ದೇವಸ್ಥಾನಕ್ಕೆ ಶಾಲುಗಳ ಒಟ್ಟು ಪೂರೈಕೆಯನ್ನು ಒಂದೇ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳು ನಿರ್ವಹಿಸಿದ್ದವು.
ಇದೀಗ ಟಿಟಿಡಿ ಟ್ರಸ್ಟ್ ಮಂಡಳಿಯು ಸಂಸ್ಥೆಗೆ ನೀಡಲಾಗಿದ್ದ ಎಲ್ಲ ಟೆಂಡರ್‌ಗಳನ್ನು ರದ್ದುಗೊಳಿಸಿದೆ ಮತ್ತು ಇಡೀ ವಿಷಯವನ್ನು ಸಮಗ್ರ ಕ್ರಿಮಿನಲ್ ತನಿಖೆಗಾಗಿ ಎಸಿಬಿಗೆ ಒಪ್ಪಿಸಿದೆ.