ನಾಳೆ(ಜು.10)ರಿಂದ ಲಾರ್ಡ್ಸ್ ಕ್ರೀಡಾಂಗಣದಲ್ಲಿ 3ನೇ ಟೆಸ್ಟ್ ಪಂದ್ಯ; ಸರಣಿ ಮುನ್ನಡೆಯತ್ತ ಭಾರತ-ಇಂಗ್ಲೆಂಡ್ ಚಿತ್ತ
PC : X
ಲಂಡನ್: ತೆಂಡುಲ್ಕರ್-ಆ್ಯಂಡರ್ಸನ್ ಟ್ರೋಫಿಗಾಗಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳು ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿವೆ.
ಮುಂದಿನ ಪಂದ್ಯದ ಮಹತ್ವದ ಬಗ್ಗೆ ಉಭಯ ತಂಡಗಳಿಗೆ ಚೆನ್ನಾಗಿ ಅರಿವಿದ್ದು, ಸರಣಿ ಮುನ್ನಡೆ ಪಡೆಯಲು ‘ಕ್ರಿಕೆಟ್ ತವರು’ ಲಾರ್ಡ್ಸ್ ಮೈದಾನಕ್ಕಿಂತ ಮತ್ತೊಂದು ವೇದಿಕೆ ಸಿಗಲಾರದು.
ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಠಿಣ ಗುರಿಯನ್ನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದರೆ, ಇದಕ್ಕೆ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಭಾರತವು ಎಜ್ಬಾಸ್ಟನ್ ಮೈದಾನದಲ್ಲಿ 2ನೇ ಪಂದ್ಯದಲ್ಲಿ 336 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಮೈದಾನದಲ್ಲಿ ಮೊತ್ತ ಮೊದಲ ಬಾರಿ ಗೆಲುವು ದಾಖಲಿಸಿ ಇತಿಹಾಸ ಬರೆದಿದೆ.
ಇದೀಗ ಎಲ್ಲರ ಗಮನವು ಶ್ರೀಮಂತ ಇತಿಹಾಸ ಹೊಂದಿರುವ ಲಾರ್ಡ್ಸ್ನತ್ತ ಹೊರಳಿದ್ದು, ಈ ಹಿಂದೆ ಲೆಜೆಂಡ್ ಗಳು ಈ ಮೈದಾನದಲ್ಲಿ ತಮ್ಮ ತಂಡಗಳ ಗೆಲುವಿಗಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ.
ಭಾರತ ತಂಡವು ತನ್ನ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ರನ್ನು ಅವಲಂಬಿಸುವ ಸಾಧ್ಯತೆಯಿದೆ. ಜೈಸ್ವಾಲ್ ಅವರು ಭರ್ಜರಿ ಫಾರ್ಮ್ ಮೂಲಕ ಹಾಗೂ ರಾಹುಲ್ ತಾಳ್ಮೆಯ ಇನಿಂಗ್ಸ್ನ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಸಾಧಾರಣ ಪ್ರದರ್ಶನ ನೀಡಿದ ಹೊರತಾಗಿಯೂ ಕರುಣ್ ನಾಯರ್ 3ನೇ ಸ್ಥಾನದಲ್ಲೇ ಮುಂದುವರಿಯುವ ಸಾಧ್ಯತೆ ಇದೆ.
ಎಜ್ಬಾಸ್ಟನ್ನಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿರುವ ನಾಯಕ ಶುಭಮನ್ ಗಿಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಉಪ ನಾಯಕ ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ರವೀಂದ್ರ ಜಡೇಜ ಆಲ್ ರೌಂಡರ್ ಸಾಮರ್ಥ್ಯಗಳ ಮೂಲಕ 6ನೇ ಕ್ರಮಾಂಕದಲ್ಲಿ ಸಮತೋಲನ ತಂದಿದ್ದಾರೆ. 7ನೇ ಕ್ರಮಾಂಕದಲ್ಲಿರುವ ವಾಶಿಂಗ್ಟನ್ ಸುಂದರ್ ಉಪಯುಕ್ತ ಬ್ಯಾಟಿಂಗ್ ಹಾಗೂ ಆಫ್ ಸ್ಪಿನ್ ಮೂಲಕ ತಂಡವನ್ನು ಆಧರಿಸುತ್ತಿದ್ದಾರೆ. ನಿತೀಶ್ ರೆಡ್ಡಿ 8ನೇ ಕ್ರಮಾಂಕದಲ್ಲಿ ಇನ್ನಷ್ಟೇ ಸಿಡಿದೇಳಬೇಕಾಗಿದೆ.
2ನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಪ್ರಸಿದ್ಧ ಕೃಷ್ಣ ಬದಲಿಗೆ 3ನೇ ಪಂದ್ಯದಲ್ಲಿ ಆಡುವ ಸಾಧ್ಯತೆಯಿದ್ದು, ಇದು ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಂಗ್ಲೆಂಡ್ ತಂಡ ಕೂಡ ನಾಲ್ಕೂವರೆ ವರ್ಷಗಳ ನಂತರ ವೇಗದ ಬೌಲರ್ ಜೋಫ್ರಾ ಆರ್ಚರ್ರನ್ನು ಆಡುವ 11ರ ಬಳಗದಲ್ಲಿ ಸ್ವಾಗತಿಸಲು ಸಜ್ಜಾಗಿದೆ. ಟೀಮ್ ಮ್ಯಾನೇಜ್ಮೆಂಟ್ ಆರ್ಚರ್ ಅವರ ಫಿಟ್ನೆಸ್ ಮೇಲೆ ತೀವ್ರ ನಿಗಾವಹಿಸಿದೆ. ಒಂದು ವೇಳೆ ಲಾರ್ಡ್ಸ್ ಮೈದಾನವು ವೇಗದ ಬೌಲರ್ ಗಳಿಗೆ ನೆರವಾದರೆ, ಅಭಿಮಾನಿಗಳು ಇಬ್ಬರು ಶ್ರೇಷ್ಠ ವೇಗಿಗಳ ನಡುವಿನ ತೀವ್ರ ಹಣಾಹಣಿಗೆ ಸಾಕ್ಷಿಯಾಗಬಹುದು.
ಇಂಗ್ಲೆಂಡ್ ತಂಡವು ಅಗ್ರ ಸರದಿಯಲ್ಲಿ ಝ್ಯಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಮೇಲೆ ವಿಶ್ವಾಸ ಇಡಲಿದೆ. ಕ್ರಾಲಿ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಓಲಿ ಪೋಪ್, ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಮಧ್ಯಮ ಸರದಿಯಲ್ಲಿ ತಂಡವನ್ನು ಆಧರಿಸಲಿದ್ದಾರೆ. ನಾಯಕ ಬೆನ್ ಸ್ಟೋಕ್ಸ್ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಹೆಚ್ಚಿನ ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಜೇಮಿ ಸ್ಮಿತ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಹೊಣೆಗಾರಿಕೆ ಮುಂದುವರಿಸಲಿದ್ದಾರೆ.
ಇಂಗ್ಲೆಂಡ್ ನ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಲ್ಬೆರಳ ಗಾಯಕ್ಕೆ ಒಳಗಾಗಿರುವ ಬ್ರೆಂಡನ್ ಕಾರ್ಸ್ 3ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಜೋಶ್ ಟಂಗ್ ವಿಶ್ರಾಂತಿ ಪಡೆಯಬಹುದು. ಅಟ್ಕಿನ್ಸನ್ ಹಾಗೂ ಜೋಫ್ರಾ ಆರ್ಚರ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಇಂಗ್ಲೆಂಡ್ ತಂಡವು ಲಾರ್ಡ್ಸ್ ಮೈದಾನದಲ್ಲಿ ಈ ತನಕ ಆಡಿರುವ 145 ಟೆಸ್ಟ್ ಪಂದ್ಯಗಳಲ್ಲಿ 59ರಲ್ಲಿ ಗೆಲುವು ದಾಖಲಿಸಿದೆ. 1990ರಲ್ಲಿ ಭಾರತ ತಂಡದ ವಿರುದ್ಧ 4 ವಿಕೆಟ್ ಗಳ ನಷ್ಟಕ್ಕೆ 653 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿ ಗರಿಷ್ಠ ಮೊತ್ತ ಕಲೆ ಹಾಕಿತ್ತು. ಅದೇ ರೀತಿ 1888ರಲ್ಲಿ ಆಸ್ಟ್ರೇಲಿಯದ ವಿರುದ್ಧ ಕೇವಲ 53 ರನ್ ಗಳಿಸಿ ಆಲೌಟಾಗಿತ್ತು. ಲಾರ್ಡ್ಸ್ ಮೈದಾನದಲ್ಲಿ ಯಾವ ರೀತಿಯ ಫಲಿತಾಂಶ ಬರಬಹುದು ಎನ್ನುವುದು ಈಗಲೇ ಊಹಿಸಲು ಸಾಧ್ಯವಿಲ್ಲ ಎಂಬ ವಿಚಾರ ಉಭಯ ತಂಡಗಳಿಗೆ ಚೆನ್ನಾಗಿ ಗೊತ್ತಿದೆ.
ಸದ್ಯ ಸರಣಿಯು ಸಮತೋಲನದಲ್ಲಿದ್ದು, ಇನ್ನುಳಿದ ಎರಡು ಪಂದ್ಯಗಳಿಗೆ ಲಾರ್ಡ್ಸ್ ಟೆಸ್ಟ್ ಪಂದ್ಯವು ಮುನ್ನುಡಿ ಬರೆಯಲಿದೆ. ಈ ಪಂದ್ಯದಲ್ಲಿ ಅತಿ ನಾಟಕೀಯ ತಿರುವು ಲಭಿಸುವ ಸಾಧ್ಯತೆ ಇದೆ.
2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಬ್ಯಾಟಿಂಗ್ ನಲ್ಲಿ ದೊಡ್ಡ ಕೊಡುಗೆ ನೀಡಿದರೆ, ವೇಗದ ಬೌಲರ್ ಆಕಾಶ್ ದೀಪ್ 10 ವಿಕೆಟ್ ಗಳ ಗೊಂಚಲು ಪಡೆದಿದ್ದರು. ತಂಡದ ಎಲ್ಲ ಆಟಗಾರರ ಒಗ್ಗಟ್ಟಿನ ಪ್ರದರ್ಶನದ ಫಲವಾಗಿ ಭಾರತ ತಂಡವು ಬರ್ಮಿಂಗ್ ಹ್ಯಾಮ್ ನಲ್ಲಿ ದೊಡ್ಡ ರನ್ ಅಂತರದ ಗೆಲುವು ಪಡೆದಿದೆ. ಈ ಗೆಲುವಿನ ಮೂಲಕ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
‘‘ಪಿಚ್ ಸ್ವಲ್ಪ ಹಸಿರು ಬಣ್ಣದಿಂದ ಕೂಡಿದೆ. ಕಳೆದ ಎರಡು ಪಂದ್ಯಗಳಲ್ಲಿ ನೋಡಿದ್ದಕ್ಕಿಂತ ಇದು ಹೆಚ್ಚಾಗಿದೆ. ಪಂದ್ಯದ ಮುನ್ನಾದಿನ ಹುಲ್ಲನ್ನು ಕತ್ತರಿಸುತ್ತಾರೆ. ಆ ನಂತರ ಪಿಚ್ ಕುರಿತು ನಾವು ಮಾತನಾಡಬಹುದು. ಮೊದಲ ಹಾಗೂ 2ನೇ ಇನಿಂಗ್ಸ್ನ ಸ್ಕೋರ್ ಗಳು ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಆದ್ದರಿಂದ ಇದು ಬೌಲರ್ ಗಳಿಗೆ ಸಹಾಯಕವಾಗುತ್ತದೆ ಎಂದು ನಾವು ನಿರೀಕ್ಷಿಸಬಹುದು’’ ಎಂದು ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
►ಹವಾಮಾನ ವರದಿ
ಟೆಸ್ಟ್ ಪಂದ್ಯದ ಐದು ದಿನಗಳಲ್ಲಿ ಮಳೆಯಿಂದಾಗಿ ಓವರ್ ಗಳನ್ನು ಕಳೆದುಕೊಳ್ಳುವ ನಿರೀಕ್ಷೆ ಇಲ್ಲ. ಏಕೆಂದರೆ ಲಂಡನ್ನಲ್ಲಿ ಹವಾಮಾನವು ಪಂದ್ಯದುದ್ದಕ್ಕೂ ಬೆಚ್ಚಗಿರುತ್ತದೆ ಹಾಗೂ ಬಿಸಿಲಿನಿಂದ ಕೂಡಿರುತ್ತದೆ ಎಂದು ಮುನ್ಸೂಚನೆ ಲಭಿಸಿದೆ.
►3ನೇ ಟೆಸ್ಟ್ ಪಿಚ್ ರಿಪೋರ್ಟ್
ಹೆಡ್ಡಿಂಗ್ಲೆ ಹಾಗೂ ಎಜ್ಬಾಸ್ಟನ್ನಲ್ಲಿ ಚಪ್ಪಟೆ ಪಿಚ್ ಗಳ ನಂತರ ಲಾರ್ಡ್ಸ್ನಲ್ಲಿ ಹಸಿರು ಹೊದಿಕೆ ಇರುವ ಪಿಚ್ ಅನ್ನು ನಿರೀಕ್ಷಿಸಲಾಗಿದೆ. ಇಂಗ್ಲೆಂಡ್ ತಂಡವು ನಿರ್ದಿಷ್ಟವಾಗಿ ತನ್ನ ವೇಗದ ಬೌಲರ್ ಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ಹುಲ್ಲಿರುವ ಪಿಚ್ ಸಿದ್ಧಪಡಿಸುವಂತೆ ಕ್ಯುರೇಟರ್ ಬಳಿ ವಿನಂತಿಸಿದೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ಹೊಸ ಚೆಂಡನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗಿರುತ್ತದೆ.
►ತಂಡಗಳು
ಭಾರತ(ಸಂಭಾವ್ಯ ಆಡುವ 11ರ ಬಳಗ): ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ಉಪ ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ಜಸ್ಪ್ರಿತ್ ಬುಮ್ರಾ, ಆಕಾಶ್ ದೀಪ್, ಮುಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ 11ರ ಬಳಗ : ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೆಂಡನ್ ಕಾರ್ಸ್, ಜೋಫ್ರಾ ಆರ್ಚರ್, ಶುಐಬ್ ಬಶೀರ್.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 3:30
(ಭಾರತೀಯ ಕಾಲಮಾನ)